ನವದೆಹಲಿ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನಿಡಿದ್ದ ಸ್ಯಾಮ್ ಪಿತ್ರೊಡಾ ಅವರನ್ನು ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಮರು ನೇಮಕ ಮಾಡಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಆದೇಶಿಸಿದ್ದಾರೆ.
ಗಾಂಧಿ ಕುಟುಂಬದ ನಿಷ್ಠ ಸ್ಯಾಮ್ ಪಿತ್ರೋಡಾ ಅವರು ನೀಡಿದ್ದ ‘ಜನಾಂಗೀಯ’ ಹೇಳಿಕೆಗಳು ಮತ್ತು ಉತ್ತರಾಧಿಕಾರ ತೆರಿಗೆಯ ಕುರಿತಾದ ಕಾಮೆಂಟ್‌ಗಳಿಂದ ಭುಗಿಲೆದ್ದ ಭಾರೀ ರಾಜಕೀಯ ವಿವಾದದ ನಂತರ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಭಾರತೀಯ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥರಾಗಿ ಪಿತ್ರೋಡಾ ಅವರ ಮರು ನೇಮಕವನ್ನು ಕಾಂಗ್ರೆಸ್ ಬುಧವಾರ ಪ್ರಕಟಿಸಿದೆ. ಈ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಹೇಳಿಕೆ ನೀಡಿದ್ದಾರೆ.
ಏಪ್ರಿಲ್ ಅಂತ್ಯದ ವೇಳೆ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ, ಪಿತ್ರೋಡಾ ಅವರು ಪಿತ್ರಾರ್ಜಿತ ತೆರಿಗೆ ಕುರಿತು ಮಾಡಿದ್ದ ಕಾಮೆಂಟ್‌ಗಳು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
ಅಲ್ಲದೆ, ಭಾರತದ ವೈವಿಧ್ಯತೆ ಕುರಿತ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನೀಡಿದ ಹೇಳಿಕೆಯು ಜನಾಂಗೀಯ ನಿಂದನೆ ಮಾಡುವಂಥದ್ದು ಎಂಬ ಆರೋಪಕ್ಕೆ ಗುರಿಯಾದ ನಂತರ ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಪಿತ್ರೊಡಾ ಮೇ 8ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅದನ್ನು ಆ ತಕ್ಷಣವೇ ಪಕ್ಷದ ಅಧ್ಯಕ್ಷ ಖರ್ಗೆ ಅಂಗೀಕರಿಸಿದ್ದರು.
ದೇಶದ ಈಶಾನ್ಯ ರಾಜ್ಯಗಳ ಜನರನ್ನು ಚೀನೀಯರಿಗೆ, ದಕ್ಷಿಣ ಭಾಗದ ಜನರನ್ನು ಆಫ್ರಿಕನ್ನರಿಗೆ, ಪಶ್ಚಿಮ ಭಾಗದ ಜನರನ್ನು ಅರಬ್ಬರಿಗೆ, ಉತ್ತರ ಭಾರತೀಯರನ್ನು ಶ್ವೇತವರ್ಣೀಯರಿಗೆ ಹೋಲಿಸಿ ಮಾತನಾಡಿದ್ದು ವಿವಾದಕ್ಕೆ ಕಾರಣವಾಗಿತ್ತು.
ಅಲ್ಲದೆ, “ಅಮೆರಿಕದಲ್ಲಿ, ಪಿತ್ರಾರ್ಜಿತ ತೆರಿಗೆ ಇದೆ. ಒಬ್ಬನು $ 100 ಮಿಲಿಯನ್ ಮೌಲ್ಯದ ಸಂಪತ್ತನ್ನು ಹೊಂದಿದ್ದರೆ, ಅವನು ಸತ್ತಾಗ, ಅವನು ಬಹುಶಃ 45 ಪ್ರತಿಶತವನ್ನು ಮಾತ್ರ ತನ್ನ ಮಕ್ಕಳಿಗೆ ವರ್ಗಾಯಿಸಬಹುದು ಮತ್ತು ಉಳಿದ 55 ಪ್ರತಿಶತವನ್ನು ಸರ್ಕಾರವು ಪಡೆದುಕೊಳ್ಳುತ್ತದೆ. ಅದು ಆಸಕ್ತಿದಾಯಕವಾಗಿದೆ. ನಿಮ್ಮ ಪೀಳಿಗೆಯಲ್ಲಿ ನೀವು ಸಂಪತ್ತನ್ನು ಗಳಿಸಿದ್ದೀರಿ ಮತ್ತು ನೀವು ಈಗ ಹೋಗುತ್ತಿದ್ದೀರಿ ಎಂದು ಕಾನೂನು ಹೇಳುತ್ತದೆ, ನೀವು ನಿಮ್ಮ ಸಂಪತ್ತತ್ತಿನ ಅದರಲ್ಲಿ ಅರ್ಧದಷ್ಟನ್ನು ಸಾರ್ವಜನಿಕರಿಗಾಗಿ ಬಿಡಬೇಕು, ನನಗೆ ಇದು ನ್ಯಾಯಯುತವಾಗಿದೆ ಎಂದು ಪಿತ್ರೋಡಾ ಹೇಳಿದ್ದರು. ಇದು ಸಹ ವಿವಾದಕ್ಕೆ ಕಾರಣವಾಗಿತ್ತು. ಈ ಎರಡೂ ಹೇಳಿಕೆಗಳಿಂದ ಪಕ್ಷವು ಅಂತರ ಕಾಯ್ದುಕೊಂಡಿತ್ತು. ನಂತರ ಪಿತ್ರೋಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ