ಬೆಂಗಳೂರು ಕಾಲ್ತುಳಿತ ಪ್ರಕರಣ : ಕೆಎಸ್‌ಸಿಎ ಪದಾಧಿಕಾರಿಗಳಿಗೆ ಹೈಕೋರ್ಟ್‌ ನಿಂದ ದೊಡ್ಡ ರಿಲೀಫ್‌

ಬೆಂಗಳೂರು : ಆರ್‌ಸಿಬಿ ವಿಜಯೋತ್ಸವಕ್ಕೂ ಮುನ್ನ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಪದಾಧಿಕಾರಿಗಳ ವಿರುದ್ಧ ಬಲವಂತ ಕ್ರಮಕೈಗೊಳ್ಳಬಾರದು ಎಂದು ಶುಕ್ರವಾರ ಹೈಕೋರ್ಟ್‌ ಆದೇಶಿಸಿದೆ.
ಅಲ್ಲದೆ, ಕೆಎಸ್‌ಸಿಎ ಪದಾಧಿಕಾರಿಗಳು ನ್ಯಾಯಾಲಯದ ವ್ಯಾಪ್ತಿ ತೊರೆಯಬಾರದು ಮತ್ತು ತನಿಖೆಗೆ ಎಲ್ಲಾ ರೀತಿಯಲ್ಲೂ ಸಹಕರಿಸಬೇಕು ಎಂದೂ ಹೈಕೋರ್ಟ್‌ ಸೂಚಿಸಿದೆ. ಕೆಎಸ್‌ಸಿಎ ಅಧ್ಯಕ್ಷ ರಘುರಾಮ ಭಟ್‌, ಕಾರ್ಯದರ್ಶಿ ಎ ಶಂಕರ, ಖಜಾಂಚಿ ಇ ಎಸ್‌ ಜಯರಾಂ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣಕುಮಾರ ಈ ಆದೇಶ ಮಾಡಿದ್ದಾರೆ.
“ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಿಗೆ ನೋಟಿಸ್‌ ಜಾರಿ ಮಾಡಲಾಗಿದ್ದು, ಆಕ್ಷೇಪಣೆ ಸಲ್ಲಿಸಬೇಕು. ಅರ್ಜಿದಾರರ ವಿರುದ್ಧ ಸರ್ಕಾರ ಬಲವಂತದ ಕ್ರಮಕೈಗೊಳ್ಳಬಾರದು. ಅರ್ಜಿದಾರರು ವಿಚಾರಣಾ ನ್ಯಾಯಾಲಯದ ವ್ಯಾಪ್ತಿ ತೊರೆಯುವಂತಿಲ್ಲ. ತನಿಖೆಗೆ ಸಹಕರಿಸಬೇಕು” ಎಂದು ಆದೇಶಿಸಿರುವ ಹೈಕೋರ್ಟ್‌ ವಿಚಾರಣೆಯನ್ನು ಜೂನ್‌ 16ಕ್ಕೆ ಮುಂದೂಡಿತು.

ಕೆಎಸ್‌ಸಿಎ ಪದಾಧಿಕಾರಿಗಳನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಅಶೋಕ ಹಾರನಹಳ್ಳಿ ಮತ್ತು ಎಂ.ಎಸ್‌. ಶ್ಯಾಮಸುಂದರ ಅವರು “ಒಂದೇ ಆರೋಪಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ ಫ್ರಾಂಚೈಸಿಯ ಪದಾಧಿಕಾರಿಗಳು, ಕಾರ್ಯಕ್ರಮ ಆಯೋಜನೆಯ ಜವಾಬ್ದಾರಿ ಹೊತ್ತಿದ್ದ ಡಿಎನ್‌ಎ ಸಂಸ್ಥೆಯ ವಿರುದ್ಧವೂ ಪ್ರತ್ಯೇಕವಾಗಿ ಎಫ್‌ಐಆರ್‌ ದಾಖಲಿಸಲಾಗಿದೆ. ಮುಖ್ಯಮಂತ್ರಿಗಳು ಬಂಧಿಸುವಂತೆ ನಿರ್ದೇಶಿಸಿದ್ದಾರೆ. ಇದರಿಂದ ತಮ್ಮ ಹಕ್ಕುಗಳಿಗೆ ಹಾನಿಯಾಗಲಿದೆ. ಪೊಲೀಸರಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಬಂಧನಕ್ಕೆ ಅವಕಾಶ ನೀಡಬಾರದು. ಎಫ್‌ಐಆರ್‌ ದಾಖಲಿಸಿರುವ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯ ಅಧಿಕಾರಿಯನ್ನು ಸರ್ಕಾರವೇ ಅಮಾನತು ಮಾಡಿದೆ” ಎಂದು ತಿಳಿಸಿದರು.
ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ ಶೆಟ್ಟಿ, ವಿಶೇಷ ಸರ್ಕಾರಿ ಅಭಿಯೋಜಕ ಬಿ ಎ ಬೆಳ್ಳಿಯಪ್ಪ ಮತ್ತು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ ಅವರು “ಮ್ಯಾಜಿಸ್ಟೀರಿಯಲ್‌ ತನಿಖೆಯ ಜೊತೆಗೆ ಹೈಕೋರ್ಟ್‌ ನಿವೃತ್ತ ನ್ಯಾ. ಮೈಕೆಲ್‌ ಕುನ್ಹಾ ನೇತೃತ್ವದ ಸಮಿತಿಗೆ ನ್ಯಾಯಾಂಗ ತನಿಖೆಯ ಹೊಣೆ ವಹಿಸಲಾಗಿದೆ. ಅಗತ್ಯವಿಲ್ಲದಿದ್ದರೆ ಎಲ್ಲರನ್ನೂ ಬಂಧಿಸುವುದಿಲ್ಲ. ಅರ್ಜಿದಾರರಿಗೆ ಆತಂಕವಿದ್ದರೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಬಹುದು” ಎಂದರು.

ಪ್ರಮುಖ ಸುದ್ದಿ :-   ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್‌ನಿಂದ ನಾಲ್ವರಿಗೆ ಟಿಕೆಟ್‌ ಘೋಷಣೆ

ನಿಖಿಲ್ ಸೋಸಲೆ ಅರ್ಜಿ ವಿಚಾರಣೆ ಮುಂದೂಡಿಕೆ
ಆರ್‌ಸಿಬಿ ಫ್ರಾಂಚೈಸಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್‌ ಸೋಸಲೆ ಬಂಧವನ್ನು ಪ್ರಶ್ನಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.
ನಿಖಿಲ್‌ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲರಾದ ಸಂದೇಶ ಚೌಟ ಮತ್ತು ಸಿ ಕೆ ನಂದಕುಮಾರ ಅವರು “ಮುಖ್ಯಮಂತ್ರಿ ನಿರ್ದೇಶನದ ಹಿನ್ನೆಲೆಯಲ್ಲಿ ನಿಖಿಲ್‌, ಡಿಎನ್‌ಎ ಈವೇಂಟ್‌ ಮ್ಯಾನೇಜ್‌ಮೆಂಟ್‌ನ ಕಿರಣ್‌ ಮತ್ತು ಸುನೀಲ್‌ ಮ್ಯಾಥ್ಯೂ ಅವರನ್ನು ಬಂಧಿಸಲಾಗಿದೆ. ಎಫ್‌ಐಆರ್‌ ದಾಖಲಿಸಿದ್ದ ಕಬ್ಬನ್‌ ಪಾರ್ಕ್‌ ಠಾಣಾಧಿಕಾರಿಯನ್ನು ಸರ್ಕಾರವೇ ಅಮಾನತು ಮಾಡಿದೆ. ಹೀಗಿರುವಾಗ ಸೋಸಲೆ ಮತ್ತು ಇತರರ ಬಂಧನವು ಅಕ್ರಮವಾಗುತ್ತದೆ” ಎಂದು ಆಕ್ಷೇಪಿಸಿದರು.
ಇದಕ್ಕೆ ಶೆಟ್ಟಿ ಅವರು “ಕಬ್ಬನ್‌ ಪಾರ್ಕ್‌ ಠಾಣಾಧಿಕಾರಿ ಅಮಾನತಿನ ಹಿನ್ನೆಲೆಯಲ್ಲಿ ಉಸ್ತುವಾರಿ ತನಿಖಾಧಿಕಾರಿಯನ್ನಾಗಿ ಅಶೋಕ ನಗರ ಠಾಣೆಯ ಅಧಿಕಾರಿಯನ್ನು ನೇಮಿಸಲಾಗಿದೆ. ಅವರು ಬಂಧನ ಮಾಡಿದ್ದಾರೆ. ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು” ಎಂದು ಕೋರಿದರು.
ಉಭಯ ಪಕ್ಷಕಾರರ ವಾದ ಆಲಿಸಿದ ಪೀಠವು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement