ಏಕರೂಪ ನಾಗರಿಕ ಸಂಹಿತೆ ಕಾಯಿದೆ ಜಾರಿಗೆ ಸಂಸತ್ತು, ವಿಧಾನಸಭೆಗಳಿಗೆ ಕರ್ನಾಟಕ ಹೈಕೋರ್ಟ್‌ ಸಲಹೆ

ಬೆಂಗಳೂರು: ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖಿಸಿರುವ ಮೂಲ ತತ್ವಗಳನ್ನು ಸಾಕಾರಗೊಳಿಸಲು ಏಕರೂಪ ನಾಗರಿಕ ಸಂಹಿತೆಗೆ (ಯುಸಿಸಿ) ಜಾರಿಗೆ ತರುವಂತೆ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳು ಎಲ್ಲಾ ಪ್ರಯತ್ನ ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಅಭಿಪ್ರಾಯಪಟ್ಟಿದೆ.
ಕುಟುಂಬದ ಆಸ್ತಿ ವಿಭಾಗ ದಾವೆಯೊಂದಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಿವೇಕ ನಗರದ ಸಮೀವುಲ್ಲಾ ಖಾನ್‌ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾವ ಅವರ ಏಕಸದಸ್ಯ ಪೀಠವು ತೀರ್ಪಿನಲ್ಲಿ ಹಲವು ವಿಷಯಗಳನ್ನು ಉಲ್ಲೇಖಿಸಿದೆ.
ಏಕರೂಪ ನಾಗರಿಕ ಸಂಹಿತೆ ಮಹಿಳೆಯರಿಗೆ ನ್ಯಾಯದ ಖಾತ್ರಿ ನೀಡುತ್ತದೆ. ಧರ್ಮ ಮತ್ತು ಜಾತಿಗಳ ನಡುವೆ ಅದು ಸಮಾನತೆ ಸೃಷ್ಟಿಸಲಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಎಲ್ಲಾ ಮಹಿಳೆಯರು ಸಂವಿಧಾನದ ಅಡಿ ಸಮಾನ ನಾಗರಿಕರಾಗಿದ್ದಾರೆ. ಧರ್ಮದ ಆಧಾರದಲ್ಲಿ ವೈಯಕ್ತಿಕ ಕಾನೂನುಗಳು ವ್ಯತ್ಯಯವಾಗಲಿದ್ದು, ಇದರಿಂದ ಮಹಿಳೆಯರಿಗೆ ತಾರತಮ್ಯ ಸೃಷ್ಟಿಯಾಗಲಿದೆ ಎಂದು ನ್ಯಾಯಾಲಯ ಹೇಳಿದೆ.

ಮುಸ್ಲಿಂ ಮಹಿಳೆ ಶಹನಾಜ್ ಬೇಗಂ ಅವರ ಮರಣದ ನಂತರ ಅವರ ಆಸ್ತಿಯ ವಿಭಜನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುವ ವೇಳೆ ನ್ಯಾಯಮೂರ್ತಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಇದರಲ್ಲಿ ಮಹಿಳೆಯ ಪತಿ ಮತ್ತು ಅವರ ಒಡಹುಟ್ಟಿದವರಿಗೆ ಸಂಬಂಧಿಸಿದ ಪ್ರಕರಣವಾಗಿದೆ.
ವಿವಿಧ ಧಾರ್ಮಿಕ ಕಾನೂನುಗಳ ಅಡಿಯಲ್ಲಿ ಮಹಿಳೆಯರ ಹಕ್ಕುಗಳಲ್ಲಿ ಭಾರಿ ವ್ಯತ್ಯಾಸವಿದ್ದು, ಇದು ಸಮಾನತೆಯ ಸಾಂವಿಧಾನಿಕ ತತ್ವಕ್ಕೆ ಧಕ್ಕೆ ತರುತ್ತದೆ ಎಂದು ನ್ಯಾಯಾಲಯವು ಕಂಡುಕೊಂಡಿತು.
ಏಕರೂಪ ನಾಗರಿಕ ಸಂಹಿತೆಯನ್ನು ಸಂವಿಧಾನದ 44 ನೇ ವಿಧಿಯಲ್ಲಿ ಉಲ್ಲೇಖಿಸಲಾಗಿದೆ. ಅದನ್ನು ಜಾರಿಗೆ ತರುವ ಮೂಲಕ ಮಾತ್ರ ನಾಗರಿಕರಿಗೆ ಸಮಾನತೆ ಮತ್ತು ನ್ಯಾಯವನ್ನು ಖಾತ್ರಿಪಡಿಸಬಹುದು ಎಂದು ನ್ಯಾಯಮೂರ್ತಿ ಸಂಜೀವಕುಮಾರ ಹೇಳಿದ್ದಾರೆ.
ಹಿಂದೂ ಉತ್ತರಾಧಿಕಾರ ಕಾನೂನಿನಲ್ಲಿ ಹೆಣ್ಣುಮಕ್ಕಳಿಗೆ ಸಮಾನ ಹಕ್ಕುಗಳನ್ನು ನೀಡಲಾಗುತ್ತದೆ. ಮುಸ್ಲಿಂ ಕಾನೂನಿನಲ್ಲಿ, ಸಹೋದರರಿಗಿಂತ ಸಹೋದರಿಯರಿಗೆ ಕಡಿಮೆ ಪಾಲು ಸಿಗುತ್ತದೆ. ಗೋವಾ ಮತ್ತು ಉತ್ತರಾಖಂಡದಂತಹ ರಾಜ್ಯಗಳು ಯುಸಿಸಿ ದಿಕ್ಕಿನಲ್ಲಿ ಉಪಕ್ರಮಗಳನ್ನು ತೆಗೆದುಕೊಂಡಿದ್ದು, ಈಗ ಅದನ್ನು ದೇಶಾದ್ಯಂತ ಜಾರಿಗೆ ತರುವ ಸಮಯ ಬಂದಿದೆ ಎಂದು ನ್ಯಾಯಾಲಯ ಹೇಳಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement