ನವದೆಹಲಿ: ದೇಶದ ರಾಜಧಾನಿಯಲ್ಲಿ ನಡೆದ ಎಐ (AI) ಶೃಂಗಸಭೆಯ ಸಂದರ್ಭದಲ್ಲಿ ಭಾರತ ಮಂಟಪದ ಮುಂದೆ ಅರೆಬೆತ್ತಲೆ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಅವರನ್ನು ದೆಹಲಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ನ್ಯಾಯಾಲಯವು ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಈ ಪ್ರತಿಭಟನೆಯ ಸಂಪೂರ್ಣ ಯೋಜನೆ ಮತ್ತು ರೂಪರೇಷೆಯ ಹಿಂದೆ ಉದಯ ಭಾನು ಅವರ ಪಾತ್ರವಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ವಿಚಾರಣೆಯ ವೇಳೆ ಚಿಬ್ ಅವರು ಪೊಲೀಸರಿಗೆ ಸರಿಯಾಗಿ ಸಹಕರಿಸುತ್ತಿಲ್ಲ ಮತ್ತು ಕೇಳಿದ ಪ್ರಶ್ನೆಗಳಿಗೆ ದಿಕ್ಕು ತಪ್ಪಿಸುವ ಉತ್ತರಗಳನ್ನು ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐದನೇ ವ್ಯಕ್ತಿಯಾಗಿ ಜಿತೇಂದ್ರ ಯಾದವ್ ಎಂಬವರನ್ನು ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಬಂಧಿಸಲಾಗಿದೆ.
ಪ್ರಮುಖ ಕಾನೂನು ಸೆಕ್ಷನ್ಗಳ ಅಡಿ ಕೇಸ್ ದಾಖಲು
ದೆಹಲಿ ಪೊಲೀಸರು ಉದಯ್ ಭಾನು ವಿರುದ್ಧ ಹಲವು ಗಂಭೀರ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ:
ಸೆಕ್ಷನ್ 61(2) (ಕ್ರಿಮಿನಲ್ ಪಿತೂರಿ), ಸೆಕ್ಷನ್ 121(1) ಮತ್ತು 132 (ಸರ್ಕಾರಿ ಕೆಲಸಕ್ಕೆ ಅಡ್ಡಿ ಮತ್ತು ಸಾರ್ವಜನಿಕ ಸೇವಕರ ಮೇಲೆ ಹಲ್ಲೆ), ಸೆಕ್ಷನ್ 196 ಮತ್ತು 197 (ಗುಂಪುಗಳ ನಡುವೆ ದ್ವೇಷ ಬಿತ್ತುವುದು ಮತ್ತು ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುವ ಹೇಳಿಕೆ), ಸೆಕ್ಷನ್ 190 (ಕಾನೂನುಬಾಹಿರ ಕೂಟದ ಸದಸ್ಯರ ಹೊಣೆಗಾರಿಕೆ)ರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಬಂಧನಕ್ಕೆ ಕಾಂಗ್ರೆಸ್ ತೀವ್ರ ಖಂಡನೆ
ಉದಯ ಭಾನು ಚಿಬ್ ಅವರ ಬಂಧನವನ್ನು ಕಾಂಗ್ರೆಸ್ ಪಕ್ಷವು “ಸಂವಿಧಾನ ವಿರೋಧಿ” ಎಂದು ಕರೆದಿದೆ. ಈ ಬಗ್ಗೆ ‘X’ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, “ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಇಂತಹ ಬೆದರಿಕೆ ತಂತ್ರಗಳಿಗೆ ನಾವು ಹೆದರುವುದಿಲ್ಲ, ಜನರ ಪರವಾಗಿ ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ಗುಡುಗಿದೆ.
ವಿಸ್ತರಿಸಿದ ತನಿಖೆ: ಹಲವರ ಬಂಧನ
ದೆಹಲಿ ಪೊಲೀಸರ ಕ್ರೈಮ್ ಬ್ರಾಂಚ್ ಮತ್ತು ಸ್ಪೆಷಲ್ ಸೆಲ್ ತಂಡಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ವಿವಿಧೆಡೆ ದಾಳಿ ನಡೆಸಿವೆ. ಗ್ವಾಲಿಯರ್ನಿಂದ ರಾಜಾ ಗುರ್ಜರ್, ಭಿಂಡ್ನಿಂದ ಬಿಮಲ್, ಝಾನ್ಸಿಯಿಂದ ಪ್ರದ್ಯುಮ್ನ ಮತ್ತು ಲಲಿತ್ಪುರದಿಂದ ಮಂತು ಶುಕ್ಲಾ ಎಂಬುವವರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರಿದಿದೆ.


ನಿಮ್ಮ ಕಾಮೆಂಟ್ ಬರೆಯಿರಿ