ಜಲ ವಿವಾದಗಳ ಕುರಿತು ನಡೆದ ಸರ್ವಪಕ್ಷ ಸಭೆ : ಕಾನೂನು ಹೋರಾಟಕ್ಕೆ ವಿಪಕ್ಷಗಳ ಬೆಂಬಲ

ಬೆಂಗಳೂರು : ಕಾವೇರಿ, ಮೇಕೆದಾಟು ಮತ್ತು ಮಹದಾಯಿ ಜಲ ವಿವಾದಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ರಾಜ್ಯ ಸರ್ಕಾರದ ಕಾನೂನು ಹೋರಾಟಕ್ಕೆ ವಿಪಕ್ಷಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ರಾಜಕೀಯ ಒತ್ತಡಕ್ಕಾಗಿ ಕೇಂದ್ರದ ಬಳಿಗೆ ಸರ್ವಪಕ್ಷದ ನಿಯೋಗವನ್ನು ಕರೆದುಕೊಂಡು ಹೋಗಲು ಸಹಕಾರ ನೀಡುವಂತೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.
ಈ ವೇಳೆ ರಾಜ್ಯ ಸರ್ಕಾರ ಸರ್ವಪಕ್ಷಗಳ ಸಭೆ ಕರೆಯುವಲ್ಲಿ ಈಗಾಗಲೇ ತಡವಾಗಿದೆ. ತಮಿಳುನಾಡಿಗೆ ಸಾಕಷ್ಟು ನೀರು ಹರಿಸಲಾಗಿದೆ ಎಂಬ ವಿಪಕ್ಷಗಳ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು.
ಆರಂಭದಲ್ಲಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು, ಕಾವೇರಿ ನದಿ ವಿವಾದದ ಮಾಹಿತಿ ಹಂಚಿಕೊಂಡರು. ಕರ್ನಾಟಕ ಮತ್ತು ಕೇರಳದ ಕಾವೇರಿ ಕಣಿವೆಯ ಪ್ರದೇಶದಲ್ಲಿ ನೈಋತ್ಯ ಮಾನ್ಸೂನ್ ವೈಫಲ್ಯದಿಂದಾಗಿ 2023-24ರ ಜಲ ವರ್ಷವು ಸಂಕಷ್ಟದ ವರ್ಷವಾಗಿದೆ. ಕಾವೇರಿ ನೀರು ನಿರ್ವಹಣಾ ಸಮಿತಿಯು ತನ್ನ ಸಭೆಯಲ್ಲಿ ಜೂನ್ ವರೆಗಿನ ಮಳೆಯ ಕೊರತೆಯನ್ನು ಗಮನಿಸಿದೆ. ಆಗಸ್ಟ್‌ 10 ರಂದು 15000 ಕ್ಯೂಸೆಕ್ ನೀರು ಬಿಡಲು ಸೂಚಿಸಿತು. ಇದನ್ನು ರಾಜ್ಯ ಬಲವಾಗಿ ವಿರೋಧಿಸಿದ್ದು, ನೀರಿನ ಪ್ರಮಾಣ 10000 ಕ್ಯೂಸೆಕ್‍ಗೆ ಇಳಿಕೆ ಮಾಡಿದೆ. ಈ ಬಗ್ಗೆ ಆಕ್ಷೇಪಿಸಿ ತಮಿಳುನಾಡು ಸುಪ್ರೀಂಕೋರ್ಟಿನಲ್ಲಿ ನೀರು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದು, ಶುಕ್ರವಾರ ಮೂರು ನ್ಯಾಯಾಧೀಶರ ಪೀಠದ ಮುಂದೆ ವಿಚಾರಣೆಗೆ ಬರಲಿದೆ ಎಂದು ಹೇಳಿದರು.

ಬಳಿಕ ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ವೀರಪ್ಪ ಮೊಯ್ಲಿ, ಸಂಸದರಾದ ಸುಮಲತಾ, ಜಗ್ಗೇಶ, ಡಾ. ಹನುಮಂತಯ್ಯ, ಮುನಿಸ್ವಾಮಿ, ಜಿ.ಎಂ. ಸಿದ್ದೇಶ್ವರ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಮೊದಲಾದವರು ರಾಜ್ಯದ ಕಾನೂನು ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಸುಪ್ರೀಂ ಕೋರ್ಟ್‌ ಮುಂದೆ ರಾಜ್ಯ ಸರ್ಕಾರ ಪ್ರಬಲವಾದ ವಾದ ಮಂಡಿಸಿ ನೀರಿನ ಲಭ್ಯತೆ, ಮಳೆ ಕೊರತೆ, ನೀರಿನ ಬೇಡಿಕೆಗಳ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಲಾಗಿದೆ. ಮೈಸೂರು, ಬೆಂಗಳೂರು, ಮಂಡ್ಯ ನಗರಗಳಿಗೆ ಕುಡಿಯುವ ನೀರಿಗೆ ಕಾವೇರಿ ನದಿ ಮೂಲವೇ ಆಸರೆಯಾಗಿದೆ. ಪ್ರಸ್ತುತ ನೀರಿನ ಸಂಗ್ರಹಣೆ ಕಡಿಮೆಯಿದ್ದು, ಕುಡಿಯುವ ನೀರಿಗೂ ಕೊರತೆಯಾಗಲಿದೆ. ಈ ಮಧ್ಯೆ ತಮಿಳುನಾಡು ವ್ಯವಸಾಯಕ್ಕೆ ನೀರು ಕೇಳುತ್ತಿದೆ. ಮಳೆ ಕೊರತೆಯಿಂದ ಕೃಷಿಗೆ ನೀರು ಪೂರೈಸುವ ಸ್ಥಿತಿಯಲ್ಲಿ ರಾಜ್ಯದ ಜಲಾಶಯಗಳಿಲ್ಲ. ಕುಡಿಯುವ ನೀರಿನ ಅಗತ್ಯತೆಗೆ ನೀರಿನ ಸಂಗ್ರಹವನ್ನು ಕಾಯ್ದುಕೊಳ್ಳಬೇಕಿದೆ. ರಾಜ್ಯದ ಹಿತ ರಕ್ಷಣೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಡಿ.ಕೆ.ಶಿವಕುಮಾರ ಹೇಳಿದರು. ಸರ್ಕಾರದ ಕಾನೂನು ಹೋರಾಟ ಮುಂದುವರೆಯಲಿದ್ದು, ಈ ನಿಟ್ಟಿನಲ್ಲಿ ಎಲ್ಲ ಪಕ್ಷಗಳ ಮುಖಂಡರು ಸಹಕಾರ ನೀಡುವಂತೆ ಕೋರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡಿ, ಸುಪ್ರೀಂಕೋರ್ಟ್‍ನಲ್ಲಿ ಪ್ರಬಲ ವಾದ ಮಂಡಿಸಿ ತ್ರಿಸದಸ್ಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿ ನೀರು ಬಿಡುಗಡೆಗೆ ವಿರೋಧ ವ್ಯಕ್ತಪಡಿಸುವ ಜೊತೆಯಲ್ಲೆ ರಾಜಕೀಯ ಒತ್ತಡ ಹೇರುವ ಕುರಿತಂತೆಯೂ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಮುಖ ಸುದ್ದಿ :-   ಕರ್ನಾಟಕ ಬಿಜೆಪಿ ಹಂಚಿಕೊಂಡ ಅನಿಮೇಟೆಡ್ ವೀಡಿಯೊ ತೆಗೆದುಹಾಕಿ ; ಎಕ್ಸ್​ ಗೆ ಚುನಾವಣಾ ಆಯೋಗ ಸೂಚನೆ

ಮಹದಾಯಿಗೆ ಅಡ್ಡಲಾಗಿ ಕಳಸಾ ಬಂಡೂರಿ ಅಣೆಕಟ್ಟು ನಿರ್ಮಾಣಕ್ಕೆ ಕೇಂದ್ರದಿಂದ ಅಗತ್ಯ ಪರವಾನಗಿಗಳನ್ನು ಪಡೆದುಕೊಳ್ಳಬೇಕಿದೆ. ಮೇಕೆದಾಟು ಯೋಜನೆಗೂ ಕೂಡ ಕೇಂದ್ರದ ಸಹಕಾರ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಬಳಿ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲು ರಾಜ್ಯಸರ್ಕಾರ ಸಿದ್ಧವಿದೆ. ವಿರೋಧ ಪಕ್ಷಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಮಾತನಾಡಿ, ರಾಜ್ಯ ಸರ್ಕಾರ ಸಂಕಷ್ಟ ಸೂತ್ರ ಆಧಾರಿತ ಕಾವೇರಿ ನೀರು ನಿರ್ವಹಣಾ ಸಮಿತಿಯ ಆದೇಶವನ್ನು ಪಾಲನೆ ಮಾಡಿದೆ. ತಮಿಳುನಾಡಿಗೆ ಹೆಚ್ಚಿನ ನೀರು ಹರಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ಜಗದೀಶ ಶೆಟ್ಟರ, ಡಿ.ವಿ.ಸದಾನಂದಗೌಡ, ವೀರಪ್ಪ ಮೊಯ್ಲಿ, ಸಚಿವರಾದ ಹೆಚ್.ಕೆ. ಪಾಟೀಲ, ಚಲುವರಾಯಸ್ವಾಮಿ, ಡಾ. ಜಿ. ಪರಮೇಶ್ವರ, ಕೆ.ಜೆ. ಜಾರ್ಜ್, ಕೃಷ್ಣ ಬೈರೇಗೌಡ, ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಶಾಸಕರು ಸಂಸದರು, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್‌, ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ ಸಿಂಗ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಹಿರಿಯ ವಕೀಲರಾದ ಮೋಹನ್ ಕಾತರಕಿ ಮತ್ತು ಇತರ ಕಾನೂನು ತಜ್ಞರು, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಮುಖ ಸುದ್ದಿ :-   ರಾಜ್ಯದ ಲೋಕಸಭೆ ಚುನಾವಣೆ 2ನೇ ಹಂತದಲ್ಲಿ ಶೇ.70.03 ಮತದಾನ; ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ ? ಇಲ್ಲಿದೆ ವಿವರ..

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement