ಬೆಂಗಳೂರು : ಬೆಳಗಾವಿಯ ಸುವರ್ಣ ಸೌಧದ ಬಳಿ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡಬೇಕು ಎಂದು ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಪ್ರಕರಣವನ್ನು ನ್ಯಾಯಾಂಗ ಆಯೋಗದ ತನಿಖೆಗೆ ವಹಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.
ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಸುವರ್ಣ ಸೌಧದ ಮುಂದೆ 10.12.2024ರಂದು ನಡೆದ ಲಾಠಿ ಚಾರ್ಜ್ ಘಟನೆಯನ್ನು ವಿಚಾರಣಾ ಆಯೋಗಕ್ಕೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಬಾಗಲಕೋಟೆಯ ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ರಾಜ್ಯ ಸರ್ಕಾರ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಬೇಕು. ಆಯೋಗವು ಕಾಲಮಿತಿಯಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಎಂದು ಪೀಠವು ಆದೇಶಿಸಿದೆ.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಸುವರ್ಣಸೌಧದ ಸುತ್ತ ನಿಷೇಧಾಜ್ಞೆ ಜಾರಿ ಮಾಡಿದ್ದು, ಪ್ರತಿಭಟನೆಗೆ ನಿಗದಿಯಾಗಿದ್ದ ಸ್ಥಳಕ್ಕೆ ಮರಳುವಂತೆ ಪೊಲೀಸರು ಮನವಿ ಮಾಡಿದ್ದಾರೆ. ನಿಗದಿತ ಸ್ಥಳ ತೊರೆಯದಂತೆ ಪ್ರತಿಭಟನಾಕಾರರಿಗೆ ಎಡಿಜಿಪಿ ಸೂಚಿಸುತ್ತಿರುವ ವೀಡಿಯೊಗಳಿವೆ. ಪ್ರತಿಭಟನಾಕಾರರು ಕಲ್ಲು ಮತ್ತು ಚಪ್ಪಲಿಗಳನ್ನು ಪೊಲೀಸರತ್ತ ಎಸೆದಿದ್ದಾರೆ. ಮದ್ಯ ಸೇವಿಸಿ, ಪೊಲೀಸರ ಮೇಲೆ ಹಲ್ಲೆ ಮಾಡುತ್ತಿರುವ ವೀಡಿಯೊಗಳಿವೆ. ಪೊಲೀಸರಿಂದ ಲಾಠಿ ಕಸಿದುಕೊಂಡು ಪೊಲೀಸರಿಗೆ ಹಲ್ಲೆ ಮಾಡುವ ದೃಶ್ಯಗಳಿವೆ. ಈ ಸಂಬಂಧ ಪೆನ್‌ಡ್ರೈವ್ ಅನ್ನು ನ್ಯಾಯಾಲಯಕ್ಕೆ ನೀಡಿದ್ದೇವೆ” ಎಂದು ವಾದಿಸಿದ್ದರು.
ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ನಿಷೇಧಾಜ್ಞೆ ವಿಧಿಸಿರುವಾಗಲೇ ನಿರ್ದಿಷ್ಟ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ನ್ಯಾಯಾಲಯವು ನಮಗೆ ಅನುಮತಿಸಿತ್ತು. ಸಚಿವರು ಮನವಿ ಸ್ವೀಕರಿಸಿದ ಬಳಿಕ ಪ್ರತಿಭಟನಾಕಾರರು ಹೊರಟಿದ್ದರು. ಆ ಸಂದರ್ಭದಲ್ಲಿ ಲಾಠಿ ಚಾರ್ಜ್ ಮಾಡಲಾಗಿದೆ. ಪ್ರತಿಭಟನೆಯಲ್ಲಿ ಧಾರ್ಮಿಕ ಮುಖಂಡರು, ಶಾಸಕರು ಮತ್ತು ಮಾಜಿ ಶಾಸಕರು ಭಾಗವಹಿಸಿದ್ದರು. ಹೀಗಿರುವಾಗ ಅಲ್ಲಿ ಮದ್ಯ ಸೇವಿಸುತ್ತಿದ್ದರು, ಕಲ್ಲು ಎಸೆದಿದ್ದಾರೆ ಎಂದು ಸರ್ಕಾರ ಹೇಳಬಾರದು. ನಾವು ಎಲ್ಲಾ ವೀಡಿಯೊಗಳನ್ನು ಪರಿಶೀಲಿಸಿದ್ದು, ಎಲ್ಲವೂ ಲಾಠಿ ಚಾರ್ಜ್ ಆದ ಬಳಿಕದ ವಿಡಿಯೋಗಳಾಗಿವೆ. ಕಾರ್ಯಕಾರಿ ಮ್ಯಾಜಿಸ್ಟ್ರೇಟ್ ಉಪಸ್ಥಿತಿಯ ಬಗ್ಗೆ ಸರ್ಕಾರದ ಆಕ್ಷೇಪಣೆಯಲ್ಲಿ ವಿವರಿಸಲಾಗಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿರುವುದರಿಂದ ನಿಷ್ಪಕ್ಷಪಾತವಾದ ತನಿಖೆ ಅಗತ್ಯವಾಗಿದೆ ಎಂದು ವಾದಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ