ಕೊರೊನಾ ನಾಲ್ಕನೇ ಅಲೆ ಸಾಧ್ಯತೆ: ಮಾಸ್ಕ್ ಧರಿಸುವುದು ಕಡ್ಡಾಯ-ಸಿಎಂ ಸಭೆಯಲ್ಲಿ ನಿರ್ಧಾರ

ಬೆಂಗಳೂರು: ಕೋವಿಡ್‌ ನಾಲ್ಕನೇ ಅಲೆ ಪ್ರವೇಶ ಸಾಧ್ಯತೆ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಮಾಸ್ಕ್ ಧರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದ್ದು, ಜನನಿಬಿಡ ಹಾಗೂ ಒಳಾಂಗಣ ಸಭೆಗಳಲ್ಲಿ ಈ ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದೆ.
ಮುಖ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ನಂತರ ಸುದ್ದಿಗಾರರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಬೆಂಗಳೂರಿನಲ್ಲಿ ಶೇ. 1.9 ರಷ್ಟು ಕೋವಿಡ್ ಹೆಚ್ಚಳವಾಗಿದೆ. ಕೋವಿಡ್ ಲಸಿಕೆ ತೆಗೆದುಕೊಂಳ್ಳದವರಲ್ಲಿ ಸೋಂಕು ಹೆಚ್ಚುತ್ತಿದೆ. ಹೀಗಾಗಿ ಲಸಿಕೆ ಹಾಗೂ ಬೂಸ್ಟರ್​ ಡೋಸ್​ಗಳನ್ನು ತಪ್ಪದೇ ಹಾಕಿಸಿಕೊಳ್ಳಿ ಎಂದು ಅವರು ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ವಿಡಿಯೋ ಸಂವಾದ ನಡೆಸಲಿದ್ದಾರೆ. ಈ ಸಭೆಯಲ್ಲಿ ನೀಡಲಿರುವ ನಿರ್ದೇಶನ ನೋಡಿಕೊಂಡು ಮತ್ತೊಂದು ಸುತ್ತಿನ ಸಭೆ ನಡೆಸಿ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನಿಸಲಾವುದು. ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸುವ ಉಪಕ್ರಮ ಸದ್ಯಕ್ಕಿಲ್ಲ. ಬೆಳವಣಿಗೆಯನ್ನು ಕಾದು ನೋಡಲು ಮುಖ್ಯಮಂತ್ರಿ ಬೊಮ್ಮಾಯಿ‌ ನಿರ್ಧರಿಸಿದ್ದಾರೆ. ಈ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳ ಮಾರ್ಗಸೂಚಿ ಹೊರಡಿಸಿ, ವ್ಯಾಪಕ ಜನ ಜಾಗೃತಿಗೆ ಮುಖ್ಯಮಂತ್ರಿ ಬೊಮ್ಮಾಯಿ‌ ಸೂಚಿಸಿದ್ದಾರೆ ಎಂದು ಡಾ.ಕೆ.ಸುಧಾಕರ್ ತಿಳಿಸಿದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್ ಪ್ರಕರಣದ ಹಿಂದೆ ಡಿಕೆ ಶಿವಕುಮಾರ ಕೈವಾಡ : ವಕೀಲ ದೇವರಾಜೇಗೌಡ ಗಂಭೀರ ಆರೋಪ

ಕಡ್ಡಾಯವಾಗಿ ಮಾಸ್ಕ್​ ಧರಿಸಿ
ಈಗ ಜನರು ಮಾಸ್ಕ್​ ಧರಿಸುವುದನ್ನು ಮರೆತಿದ್ದಾರೆ. ಇನ್ಮುಂದೆ ಜನರು ಕಡ್ಡಾಯವಾಗಿ ಮಾಸ್ಕ್​ ಧರಿಸಬೇಕು, ಸಾಮಾಜಿಕ ಅಂತರವನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿರುವ ಅವರು,
ಒಮಿಕ್ರಾನ್ ತಳಿಯೇ ಆದರೆ ರೋಗ ಲಕ್ಷಣಗಳು ಬಹುತೇಕ ಒಂದೇ ತೆರನಾಗಿ ಇರುತ್ತವೆ. ಎಲ್ಲ ಪಕ್ಷಗಳೂ ಸಭೆ, ಸಮಾರಂಭಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಸಭೆಯಲ್ಲಿ ಕಡ್ಡಾಯ ಮಾಸ್ಕ್​ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ತಿಳಿಸಿದ ಸಚಿವ ಸುಧಾಕರ ಅವರು, ಮಾಸ್ಕ್​ ಹಾಕದವರಿಗೆ ಸದ್ಯಕ್ಕೆ ದಂಡ ವಿಧಿಸುವುದಿಲ್ಲ. ಕಡ್ಡಾಯ ಮಾಸ್ಕ್ ಸಂಬಂಧ ಮತ್ತೆ ಮಾರ್ಗಸೂಚಿ ಹೊರಡಿಸಲಾಗುವುದು. ಹೊರ ರಾಜ್ಯಗಳಿಂದ ಬರುವವರ ಮೇಲೆ ಯಾವ ರೀತಿ‌ ನಿಗಾ ಇಡಬೇಕೆಂದು ಆ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಹೊಸ ತಳಿ ಪತ್ತೆಯಾಗಿಲ್ಲ
ದೇಶದಲ್ಲಿ 4ನೇ ಅಲೆ ಆತಂಕ ಹೆಚ್ಚಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳು ಅಗತ್ಯವಾಗಿದೆ. ಸೋಂಕಿತರಲ್ಲಿ ಹೊಸ ತಳಿ ಪತ್ತೆಯಾಗಿಲ್ಲ. ಈ ಬಗ್ಗೆ ಎರಡು ಮೂರು ದಿನಗಳಲ್ಲಿ ಅಧಿಕೃತವಾಗಿ ವರದಿ ಬರಲಿದೆ ಎಂದರು. ನಿತ್ಯ ಹತ್ತು ಸಾವಿರ ಟೆಸ್ಟಿಂಗ್ ನಡೆಯುತ್ತಿದೆ. ರೋಗ ಲಕ್ಷಣಗಳು ಇದ್ದವರಿಗೆ ಟೆಸ್ಟಿಂಗ್ ಮಾಡಬೇಕು ಎಂಬ ಕೇಂದ್ರದ ಮಾರ್ಗಸೂಚಿ ಪಾಲನೆ ಮಾಡಲಾಗುತ್ತಿದೆ. ದೆಹಲಿಯಲ್ಲಿ ತೀವ್ರವಾದ ಸಮಸ್ಯೆ ಇಲ್ಲ, ಐಸಿಯು ಆಸ್ಪತ್ರೆ ದಾಖಲಾತಿ ಕಡಿಮೆ ಇದೆ. ಆದರೆ ವಿದೇಶಗಳಲ್ಲಿ ಹೆಚ್ಚಿದೆ. ಇದಕ್ಕೆ ಲಸಿಕೆ ಮಾಡದೇ ಇರುವುದು ಕಾರಣ ಎಂದರು.
ಥೈಲ್ಯಾಂಡ್, ದಕ್ಷಿಣ ಕೊರಿಯಾ, ಜಪಾನ್ ನಿಂದ ಬೆಂಗಳೂರಿಗೆ ಬರುವವರ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಏರ್​ಪೋರ್ಟ್​ನಲ್ಲಿ ಬಿಗಿಭದ್ರತೆಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಡಾ. ಸುಧಾಕರ್​ ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   ಬಸವನಗುಡಿಯ ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದ ಎಸ್‌ಐಟಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement