
ನವದೆಹಲಿ: ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಗಳ ಹೊಸ್ತಿಲಿನಲ್ಲಿ, ಈ ರಾಜ್ಯಗಳನ್ನು ಗುರಿಯಾಗಿಸಿಕೊಂಡು ಕೇಂದ್ರ ಬಜೆಟ್ 2026ರಲ್ಲಿ ಹಲವು ಪ್ರಮುಖ ಯೋಜನೆಗಳನ್ನು ಘೋಷಿಸಲಾಗಿದೆ. ರೈಲ್ವೆ ಕಾರಿಡಾರ್‌ಗಳು, ಕೃಷಿ ಉತ್ತೇಜನ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ನಿರ್ಮಲಾ ಸೀತಾರಾಮನ್ ಆದ್ಯತೆ ನೀಡಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ಸಿಕ್ಕಿದ್ದೇನು?
ಬಂಗಾಳದಲ್ಲಿ ಅಧಿಕಾರ ಹಿಡಿಯುವ ಗುರಿ ಹೊಂದಿರುವ ಬಿಜೆಪಿ ಸರ್ಕಾರ, ಅಲ್ಲಿನ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ.
ಈಸ್ಟ್ ಕೋಸ್ಟ್ ಇಂಡಸ್ಟ್ರಿಯಲ್ ಕಾರಿಡಾರ್: ದುರ್ಗಾಪುರವನ್ನು ಪ್ರಮುಖ ಕೇಂದ್ರವಾಗಿರಿಸಿಕೊಂಡು ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ.
ಪೂರ್ವೋದಯ ಪ್ರವಾಸೋದ್ಯಮ: ಬಿಹಾರ, ಜಾರ್ಖಂಡ್, ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶ ರಾಜ್ಯಗಳನ್ನು ಒಳಗೊಂಡ ಐದು ಪ್ರವಾಸಿ ತಾಣಗಳ ನಿರ್ಮಾಣ.
ಸೂರತ್-ದಂಕುನಿ ಫ್ರೈಟ್ ಕಾರಿಡಾರ್: ಗುಜರಾತ್ ಮತ್ತು ಬಂಗಾಳ ನಡುವೆ ನೇರ ಸಂಪರ್ಕ ಕಲ್ಪಿಸುವ ಸರಕು ಸಾಗಣೆ ಕಾರಿಡಾರ್.
ಹೈಸ್ಪೀಡ್ ರೈಲು: ವಾರಣಾಸಿ ಮತ್ತು ಸಿಲಿಗುರಿ ನಡುವೆ ಅತಿವೇಗದ ರೈಲು ಸಂಪರ್ಕದ ಪ್ರಸ್ತಾವನೆ.

ತಮಿಳುನಾಡು ಮತ್ತು ಕೇರಳಕ್ಕೆ ಹೊಸ ಯೋಜನೆಗಳು
ದಕ್ಷಿಣದ ಈ ರಾಜ್ಯಗಳಲ್ಲಿ ಚುನಾವಣಾ ಮೈಲೇಜ್ ಪಡೆಯಲು ಕೇಂದ್ರ ಸರ್ಕಾರ ಈ ಕೆಳಗಿನ ಯೋಜನೆಗಳನ್ನು ಘೋಷಿಸಿದೆ:
ಅಪರೂಪದ ಖನಿಜ ಕಾರಿಡಾರ್ (Rare Earth Corridors): ತಮಿಳುನಾಡು, ಕೇರಳ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಗಣಿಗಾರಿಕೆ ಮತ್ತು ಸಂಶೋಧನೆ ಉತ್ತೇಜಿಸಲು ಈ ಕಾರಿಡಾರ್ ಸ್ಥಾಪನೆ.
ರೈಲ್ವೆ ಸಂಪರ್ಕ: ಹೈದರಾಬಾದ್-ಚೆನ್ನೈ ಮತ್ತು ಚೆನ್ನೈ-ಬೆಂಗಳೂರು ನಡುವೆ ಹೈಸ್ಪೀಡ್ ರೈಲು ಕಾರಿಡಾರ್.
ತೆಂಗು ಉತ್ತೇಜನ ಯೋಜನೆ: ತೆಂಗು ಬೆಳೆಗಾರರಿಗೆ ನೆರವಾಗಲು ಹೊಸ ಸಸಿಗಳನ್ನು ನೆಡುವುದು ಮತ್ತು ಉತ್ಪಾದಕತೆ ಹೆಚ್ಚಿಸಲು ವಿಶೇಷ ಯೋಜನೆ.
ಪ್ರವಾಸೋದ್ಯಮ: ತೂತುಕುಡಿಯ ಆದಿಚನಲ್ಲೂರು ಪುರಾತತ್ವ ತಾಣದ ಅಭಿವೃದ್ಧಿ ಮತ್ತು ಪಶ್ಚಿಮ ಘಟ್ಟದ ಪೋಧಿಗೈ ಮಲೈನಲ್ಲಿ ಟ್ರೆಕ್ಕಿಂಗ್ ಸೌಲಭ್ಯ.
ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ಧಿ
ಬೌದ್ಧ ಸರ್ಕ್ಯೂಟ್: ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಬೌದ್ಧ ಧರ್ಮದ ಪ್ರಮುಖ ಕೇಂದ್ರಗಳ ಅಭಿವೃದ್ಧಿ ಮತ್ತು ಸಂರಕ್ಷಣೆ.
ಆರೋಗ್ಯ ಕ್ಷೇತ್ರ: ತೇಜಪುರದಲ್ಲಿರುವ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆಯನ್ನು ‘ಪ್ರಾದೇಶಿಕ ಅಪೆಕ್ಸ್ ಸಂಸ್ಥೆ’ಯಾಗಿ ಮೇಲ್ದರ್ಜೆಗೇರಿಸಲಾಗುವುದು.
ಕೃಷಿ: ಅಸ್ಸಾಂನ ಅಗರ್ ಮರಗಳು ಹಾಗೂ ಗಂಧದ ಮರ, ಕೊಕೊ ಮತ್ತು ಗೋಡಂಬಿ ಬೆಳೆಗಾರರಿಗೆ ವಿಶೇಷ ಬೆಂಬಲ.


ನಿಮ್ಮ ಕಾಮೆಂಟ್ ಬರೆಯಿರಿ