ಹುಬ್ಬಳ್ಳಿ | ವಕ್ಫ್‌ ಆಸ್ತಿ ವಿವಾದ : ಅಹವಾಲು ಸ್ವೀಕರಿಸಿದ ಜಂಟಿ ಸಂಸದೀಯ ಸಮಿತಿ

ಹುಬ್ಬಳ್ಳಿ: ನಗರಕ್ಕೆ ಆಗಮಿಸಿರುವ ಸಂಸದ ಜಗದಾಂಬಿಕಾ ಪಾಲ ಅವರ ಅಧ್ಯಕ್ಷತೆಯ ವಕ್ಫ್‌ ಕಾಯ್ದೆ ತಿದ್ದುಪಡಿ ಮಸೂದೆಯ ಜಂಟಿ ಸಂಸದೀಯ ಸಮಿತಿಯು ವಕ್ಫ್ ನೋಟಿಸ್‌ಗೆ ಸಂಬಂಧಿಸಿದಂತೆ 75ಕ್ಕೂ ಹೆಚ್ಚು ಅಹವಾಲುಗಳು ಸಲ್ಲಿಕೆಯಾಯಿತು.
ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಒಂದು ಗಂಟೆಗೂ ಹೆಚ್ಚು ಕಾಲ ಅಹವಾಲು ಸಭೆ ನಡೆದಿದ್ದು, ರೈತರು, ಜನಸಾಮಾನ್ಯರು, ವಿವಿಧ ಸಂಘಟನೆಗಳು ಹಾಗೂ ಬಿಜೆಪಿ ಶಾಸಕರು ಸಹ ಸಮಿತಿಗೆ ತಮ್ಮ ಅಹವಾಲು ಸಲ್ಲಿಸಿದರು.
ವಕ್ಫ್‌ ಆಸ್ತಿಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯು ರಚಿಸಿದ್ದ ಸತ್ಯಶೋಧನಾ ಸಮಿತಿಯ ಅಧ್ಯಕ್ಷ ಗೋವಿಂದ ಕಾರಜೋಳ ತಮ್ಮ ವರದಿಯ ಪ್ರತಿಯನ್ನು ಸಮಿತಿಗೆ ನೀಡಿದರು.

‘ವಿಜಯಪುರ ಜಿಲ್ಲೆಯ ವಿವಿಧೆಡೆ ಸಂಚರಿಸಿ, ಈ ವರದಿಯನ್ನು ಸಿದ್ಧಪಡಿಸಿದ್ದೇವೆ. 5ನೇ ಶತಮಾನ ಹಾಗೂ 12ನೇ ಶತಮಾನದಲ್ಲಿ ನಿರ್ಮಾಣವಾಗಿರುವ ದೇವಸ್ಥಾನದ ಜಾಗವನ್ನು ಸಹ ವಕ್ಫ್‌ ಆಸ್ತಿ ಎಂದು ನಮೂದಿಸಿರುವುದು ಕಂಡುಬಂದಿದೆ. ಹಿಂದೂ ದೇವಸ್ಥಾನಗಳ, ಮಠಗಳ ಆಸ್ತಿ ಹಾಗೂ ರೈತರ 1,000ಕ್ಕೂ ಹೆಚ್ಚು ಎಕರೆ ಜಾಗದ ಆರ್‌.ಟಿ.ಸಿ ಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದಿಸಲಾಗಿರುವುದನ್ನು ದಾಖಲೆ ಸಮೇತ ವರದಿ ನೀಡಿದ್ದೇವೆ’ ಎಂದು ಕಾರಜೋಳ ತಿಳಿಸಿದರು.
‘ರಾಜ್ಯದಲ್ಲಿ ವಕ್ಫ್‌ ಬೋರ್ಡ್‌ನಿಂದ ರೈತರಿಗೆ ನೋಟಿಸ್ ನೀಡಿರುವುದನ್ನು ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಗಮನಕ್ಕೆ ತರಲಾಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ಸವಣೂರು ಸೇರಿದಂತೆ ಎಲ್ಲ ತಾಲೂಕುಗಳಲ್ಲಿ ವಕ್ಫ್‌ ಬೋರ್ಡ್ ನಿಂದ ರೈತರಿಗೆ, ಆಸ್ಪತ್ರೆ, ಶಾಲೆ, ಕಾಗಿನೆಲೆ ಮಠಗಳಿಗೆ ನೊಟೀಸ್ ನೀಡಲಾಗಿದೆ.ಕಾಗಿನೆಲೆಯ ಪೀಠವು ವಕ್ಫ್ ಆಸ್ತಿಗೆ ಸೇರಿದ್ದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಪ್ರಮುಖ ಸುದ್ದಿ :-   ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ ನೇಮಕ

ಕೇವಲ ಹಾವೇರಿ ಜಿಲ್ಲೆಯಷ್ಟೇ ಅಲ್ಲ ಧಾರವಾಡ, ವಿಜಯಪುರ, ಕೊಪ್ಪಳ, ಗದಗ, ಹಳೆ ಮೈಸೂರಿನ ಮಂಡ್ಯ, ಮೈಸೂರು ಜಿಲ್ಲೆ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ರೈತರಿಗೆ ನೊಟೀಸ್ ಕೊಟ್ಟಿದ್ದಾರೆ‌. ವಕ್ಫ್‌ ಕಾಯಿದೆ ದುರ್ಬಳಕೆ ಮಾಡಿಕೊಂಡಿರುವುದರಿಂದ ಸಮಸ್ಯೆ ಉಲ್ಬಣಗೊಂಡಿದೆ. ಕೇವಲ ಹಿಂದೂಗಳಲ್ಲ, ಮುಸ್ಲಿಂ ಸಮುದಾಯದ ರೈತರ ಜಮೀನಿಗೂ ನೊಟಿಸ್ ಕೊಟ್ಟಿದ್ದಾರೆ. ಇವೆಲ್ಲವುಗಳನ್ನೂ ಜೆಪಿಸಿ ಅಧ್ಯಕ್ಷ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.
ಸತ್ಯಶೋಧನಾ ಸಮಿತಿಯ ಸದಸ್ಯ, ವಕೀಲ ಎಂ.ಬಿ. ಜಿರಲಿ ಮಾತನಾಡಿ, ‘ಮಾಲೀಕರಿಗೆ ಯಾವುದೇ ನೋಟಿಸ್‌ ನೀಡದೇ ಜಾಗವನ್ನು ವಕ್ಫ್‌ ಆಸ್ತಿ ಎಂದು ಆರ್‌.ಟಿ.ಸಿ ಯಲ್ಲಿ ನಮೂದಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ರೈತರ ಹೇಳಿಕೆಗಳು ಹಾಗೂ ದಾಖಲೆಗಳನ್ನು ಸಹ ನೀಡಿದ್ದೇವೆ’ ಎಂದರು.
ಅಹವಾಲು ಸಭೆಯಲ್ಲಿ ವಿಧಾನಸಭೆಯ ವಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ, ಹಾವೇರಿ ಜಿಲ್ಲೆಯ ವಕೀಲರು, ಕುಂದಗೋಳ ಶಾಸಕ ಎಂ.ಆರ್‌. ಪಾಟೀಲ, ಭಾರತೀಯ ಕಿಸಾನ್‌ ಸಂಘ, ರತ್ನ ಭಾರತ ರೈತ ಸಮಾಜ, ನರಗುಂದ ರೈತರು, ಧಾರವಾಡ ಜಿಲ್ಲೆಯ ಉಪ್ಪಿನ ಬೆಟಗೇರಿ ರೈತರು, ಹಾವೇರಿ ಜಿಲ್ಲೆಯ ಹಾನಗಲ್‌ ರೈತರು, ಹಿಂದೂ ಜಾಗರಣ ವೇದಿಕೆ, ಗದಗ ಜಿಲ್ಲೆಯ ರೈತರು, ಗರಗ, ಅಣ್ಣಿಗೇರಿ ಸಾರ್ವಜನಿಕರು ಅಹವಾಲು ಸಲ್ಲಿಸಿದರು.
ಅಹವಾಲುಗಳನ್ನು ಸ್ವೀಕರಿಸಿದ ಜಗದಾಂಬಿಕಾ ಪಾಲ ‘ಎಲ್ಲ ಅಹವಾಲುಗಳನ್ನು ಪರಿಶೀಲನೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ಪ್ರಮುಖ ಸುದ್ದಿ :-   ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ; ಸಿಎಂ ಡಿಕೆ ಶಿವಕುಮಾರ ಘೋಷಣೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement