ಉಡುಪಿ : ವಿಹಾರಕ್ಕೆಂದು ಪ್ರವಾಸಿಗರನ್ನು ಕರೆದೊಯ್ಯತ್ತಿದ್ದ ದೋಣಿ ಸಮುದ್ರದಲ್ಲಿ ಮಗುಚಿ ಇಬ್ಬರು ಸಾವಿಗೀಡಾದ ಘಟನೆ ಉಡುಪಿ ತಾಲೂಕಿನ ಕೋಡಿಬೆಂಗ್ರೆ ಅಳಿವೆ ಬಾಗಿಲಿನ ಬಳಿ ನಡೆದಿದೆ ಎಂದು ವರದಿಯಾಗಿದೆ.
ಮೃತರನ್ನು ಶಂಕರಪ್ಪ (22) ಸಿಂಧು ( 23) ಎಂದು ಗುರುತಿಸಲಾಗಿದೆ. ಮತ್ತಿಬ್ಬರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೋಡಿಬೆಂಗ್ರೆ ಬಳಿಯ ಡೆಲ್ಟಾ ಬೀಚ್ ನಿಂದ ಪ್ರವಾಸಿ ಬೋಟ್ ನಲ್ಲಿ ಹೊರಟ ಸಮಯದಲ್ಲಿ ಸುಮಾರು 10 ರಿಂದ 15 ಪ್ರವಾಸಿಗರು ದೋಣಿಯಲ್ಲಿದ್ದರು.. ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಬೋಟ್ ಮಗುಚಿ ಬಿದ್ದಿದೆ.
ಬೋಟ್ ಮಗುಚಿ ಬಿದ್ದ ತಕ್ಷಣವೇ ಸ್ಥಳೀಯರು ಮತ್ತು ಬೇರೆ ದೋಣಿಯಲ್ಲಿದ್ದವರು ಎಲ್ಲರನ್ನೂ ರಕ್ಷಿಸಿ ದಡಕ್ಕೆ ತಂದಿದ್ದಾರೆ. ಘಟನೆಯ ವೇಳೆ ನಾಲ್ವರು ಗಂಭೀರ ಸ್ಥಿತಿಯಲ್ಲಿದವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರಲ್ಲಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ದಿಶಾ(26) ಎಂಬವರ ಸ್ಥಿತಿ ಗಂಭೀರವಾಗಿದ್ದು, ಧರ್ಮರಾಜ(26) ಎಂಬವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಇವರು ಮೈಸೂರು ಜಿಲ್ಲೆಯ ಸರಸ್ವತೀಪುರಂ ಮೂಲದವರಾಗಿದ್ದು, ಅಲ್ಲಿನ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ