ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಸಿಎಂ ಬೊಮ್ಮಾಯಿ, ಯಡಿಯೂರಪ್ಪ, ದತ್ತಾತ್ರೇಯ ಹೊಸಬಾಳೆ ಸಿದ್ದರಾಮಯ್ಯ ಸೇರಿ ಹಲವರ ಸಂತಾಪ

ಬೆಂಗಳೂರು: ಸುಗಮ ಸಂಗೀತ ಕ್ಷೇತ್ರದ ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ (83) ಗುರುವಾರ ನಿಧನರಾಗಿದ್ದು, ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಆರ್​ಎಸ್​ಎಸ್​ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್​ ನಾಯಕ ಎಚ್​.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಮುರುಗೇಶ್ ನಿರಾಣಿ, ಆರಗ ಜ್ಞಾನೇಂದ್ರ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
‘ಕನ್ನಡ ಭಾವಗೀತೆಗಳಿಗೆ ಜೀವತುಂಬಿದ, ಕನ್ನಡದ ಮೊದಲ ರಜತ ಕಮಲ ಪ್ರಶಸ್ತಿಗೆ ಭಾಜನರಾದ ಅಪ್ರತಿಮ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ಅಗಲಿಕೆ ಕನ್ನಡ ಕಲಾಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ದೇವರು ಅವರಿಗೆ ಸದ್ಗತಿಯನ್ನು ಕರುಣಿಸಲಿ, ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಟ್ವೀಟ್‌ ಮಾಡಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ‘ಸುಪ್ರಸಿದ್ಧ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ ಎಂಬುದು ಅಸಹನೀಯ ನೋವಿನ ಸಂಗತಿ. ಅವರ ಕುಟುಂಬದವರಿಗೆ ನನ್ನ ತೀವ್ರ ಸಂತಾಪಗಳು. ಶಿಶುನಾಳ ಷರೀಫರು, ಕುವೆಂಪು ಹಾಗೂ ಹಲವಾರು ಕನ್ನಡ ಕವಿಗಳ ಹಾಡುಗಳನ್ನು ಮನೆ ಮಾತಾಗಿಸಿದ ಅವರು ಸುಗಮ ಸಂಗೀತದ ದೊರೆಯಾಗಿದ್ದರು. ಇನ್ನು ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಿನಲ್ಲಿ ಉಳಿಯುತ್ತಾರೆ. ಗತಿಸಿದ ಅವರ ಆತ್ಮಕ್ಕೆ ಸದ್ಗತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ‘ ಎಂದು ದತ್ತಾತ್ರೇಯ ಹೊಸಬಾಳೆ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ‘ಸುಗಮ ಸಂಗೀತ ಲೋಕದ ಅನನ್ಯ ಪ್ರತಿಭೆ, ಪ್ರಖ್ಯಾತ ಗಾಯಕರು, ತಮ್ಮ ಸುಸ್ವರದ ಮೂಲಕ ಕವಿಗೀತೆಗಳಿಗೆ ಮೆರುಗು ತಂದುಕೊಟ್ಟಿದ್ದ ಶಿವಮೊಗ್ಗ ಸುಬ್ಬಣ್ಣ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಗಿದೆ. ಕುವೆಂಪು, ಬೇಂದ್ರೆ ಸೇರಿ ಹೆಸರಾಂತ ಕವಿಗಳ ಗೀತೆಗಳಿಗೆ ಸ್ವರ ಕಟ್ಟಿದ ಸುಬ್ಬಣ್ಣ ಅವರ ಅಗಲಿಕೆ ನಾಡಿಗೆ ಬಹದೊಡ್ಡ ನಷ್ಟ. ಸುಬ್ಬಣ್ಣ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರು, ಅವರ ಸಂಗೀತ ಪರಿವಾರಕ್ಕೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

‘ಕನ್ನಡದ ಪ್ರಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ನಿಧನದಿಂದ ಸಂಗೀತ ಲೋಕ ಮತ್ತು ಕನ್ನಡಿಗರಾದ ನಾವೆಲ್ಲರೂ ಸಿರಿಕಂಠವೊಂದನ್ನು ಕಳೆದುಕೊಂಡಿದ್ದೇವೆ. ಸುಬ್ಬಣ್ಣ ಅವರು ಹಾಡುಗಳ ಮೂಲಕ ನಮ್ಮೊಳಗೆ ಸದಾ ಜೀವಂತವಾಗಿರುತ್ತಾರೆ. ಅವರ ಕುಟುಂಬ ಮತ್ತು ಅಭಿಮಾನಿಗಳ ದುಃಖ ದಲ್ಲಿ ನಾನೂ ಭಾಗಿಯಾಗಿದ್ದೇನೆ’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

‘ಕಾಡು ಕುದುರೆ ಓಡಿ ಬಂದಿತ್ತಾ ಹಾಡಿನ ಮೂಲಕ ಜನಮಾನಸದಲ್ಲಿ ಉಳಿದ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣನವರ ಸಾವು ತೀವ್ರ ನೋವನ್ನುಂಟು ಮಾಡಿದೆ. ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಹಾಗೂ ಕುಟುಂಬಸ್ಥರಿಗೆ ಮತ್ತು ಅಭಿಮಾನಿಗಳಿಗೆ ದುಃಖ ಸಹಿಸುವ ಶಕ್ತಿ ನೀಡಲಿ’ ಎಂದು ಪ್ರಲ್ಹಾದ ಜೋಶಿ ‘ಕೂ’ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ : ತಾಯಿ-ಮಗು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement