ಐದು ರಾಜ್ಯಗಳ ಚುನಾವಣೆಗೆ ಬಿಜೆಪಿ ಉಸ್ತುವಾರಿಗಳ ನೇಮಕ:ಪ್ರಹ್ಲಾದ ಜೋಶಿ ಉತ್ತರಖಂಡಕ್ಕೆ ಉಸ್ತುವಾರಿ, ಉತ್ತರ ಪ್ರದೇಶಕ್ಕೆ ಕರಂದ್ಲಾಜೆ ಸಹ ಉಸ್ತುವಾರಿ

ನವದೆಹಲಿ: ಉತ್ತರ ಪ್ರದೇಶ, ಉತ್ತರಖಂಡ, ಪಂಜಾಬ್, ಮಣಿಪುರ ಮತ್ತು ಗೋವಾ ಈ ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಳಿಗೆ ಉಸ್ತುವಾರಿ ನೋಡಿಕೊಳ್ಳಲು ಕೇಂದ್ರ ಸಚಿವರ ನೇತೃತ್ವದ ತಂಡಗಳನ್ನು ಬಿಜೆಪಿ ರಚಿಸಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಉತ್ತರ ಖಂಡದ ಉಸ್ತುವಾಗಿ ವಹಿಸಲಾಗಿದೆ ಹಾಗೂ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಉತ್ತರ ಪ್ರದೇಶಕ್ಕೆ ಪಕ್ಷದ ಸಹ ಉಸ್ತುವಾರಿಯಾಗಲಿದ್ದಾರೆ.
ಹೈವೋಲ್ಟೇಜ್ ಚುನಾವಣೆ ಎಂದೇ ಪರಿಗಣಿಸಲಾಗಿರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಗಾಗಿ ಬಿಜೆಪಿ ಉಸ್ತುವಾರಿ ನೋಡಿಕೊಳ್ಳುವ ಹೊಣೆಯನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಒಪ್ಪಿಸಲಾಗಿದೆ. ಇವರ ತಂಡದಲ್ಲಿ ಸಹಾಯಕ ಸಚಿವರಾದ ಶೋಭಾ ಕರಂದ್ಲಾಜೆ, ಅನುರಾಗ್ ಠಾಕೂರ್, ಅರ್ಜುನ್ ರಾಮ್ ಮೇಘ್ವಾಲ್, ಅನ್ನಪೂರ್ಣ ದೇವಿ, ಪಕ್ಷದ ಮುಖಂಡರಾದ ಸರೋಜ್ ಪಾಂಡೆ, ವಿವೇಕ್ ಠಾಕೂರ್ ಮತ್ತು ಕ್ಯಾಪ್ಟನ್ ಅಭಿಮನ್ಯು ಇರಲಿದ್ದಾರೆ.
ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಅವರಿಗೆ ಉತ್ತರ ಖಂಡದ ಉಸ್ತುವಾಗಿ ವಹಿಸಲಾಗಿದ್ದು, ಈ ತಂಡದಲ್ಲಿ ಪಕ್ಷದ ಧುರೀಣರಾದ ಸಂಸದ ಲಾಕೆಟ್ ಬ್ಯಾನರ್ಜಿ ಮತ್ತು ಆರ್‌ಪಿ ಸಿಂಗ್ ಸಹ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಪಂಜಾಬ್ ರಾಜ್ಯಕ್ಕೆ ಬಿಜೆಪಿ ಉಸ್ತುವಾರಿಯನ್ನು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಶೇಖಾವತ್ ಅವರಿಗೆ ವಹಿಸಲಾಗಿದ್ದು, ಸಚಿವರಾದ ಹರದೀಪ್ ಸಿಂಗ್ ಪುರಿ, ಮೀನಾಕ್ಷಿ ಲೇಖಿ, ವಿನೋದ್ ಚಾವ್ದಾ ಅವರಿಗೆ ಸಹ-ಉಸ್ತುವಾರಿ ನೀಡಲಾಗಿದೆ.
ಕಾರ್ಮಿಕ ಸಚಿವ ಭೂಪಿಂದರ್ ಯಾದವ್ ಅವರಿಗೆ ಮಣಿಪುರದ ಉಸ್ತುವಾರಿ ಜವಾಬ್ದಾರಿ ಕೊಡಲಾಗಿದೆ. ಸಚಿವರಾದ ಪ್ರತಿಮಾ ಭೌಮಿಕ್ ಮತ್ತು ಅಶೋಕ್ ಸಿಂಘಲ್ ಅವರಿಗೆ ಸಹ-ಉಸ್ತುವಾರಿ ಸಹಾಯ ಮಾಡಲು ಸೂಚಿಸಲಾಗಿದೆ.
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಗೋವಾ ಉಸ್ತುವಾರಿ ವಹಿಸಲಾಗಿದ್ದು, ಸಚಿವರಾದ ದರ್ಶನ ಜರ್ದೋಶ್ ಮತ್ತು ಐ. ಕೃಷ್ಣ ರೆಡ್ಡಿ , ಸಹ ಉಸ್ತುವಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ 35 ವರ್ಷಗಳಿಂದ ಪಕ್ಷದಲ್ಲಿದ್ದ ಪ್ರಿಯಾಂಕಾ ಗಾಂಧಿ ಆಪ್ತ ತಜೀಂದರ್ ಸಿಂಗ್ ಬಿಟ್ಟು...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement