ಜಾಗತಿಕ ಭೂಪಟದಲ್ಲಿ ಉತ್ತರ ಕನ್ನಡಕ್ಕೆ ಹೆಮ್ಮೆ: ಯಾಣದ ಶಿಲೆಗಳು ‘ರಾಷ್ಟ್ರೀಯ ಭೂಪಾರಂಪರಿಕ ತಾಣ’ ಎಂದು ಘೋಷಣೆ

ಬೆಂಗಳೂರು: ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ಮಧ್ಯೆ ನಿಂತಿರುವ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ‘ಯಾಣ’ದ ಬೃಹತ್ ಶಿಲೆಗಳಿಗೆ ಈಗ ಅತ್ಯುನ್ನತ ರಾಷ್ಟ್ರೀಯ ಮಾನ್ಯತೆ ಲಭಿಸಿದೆ. ಸುಮಾರು 120 ಮೀಟರ್ ಎತ್ತರದ ಭೈರವೇಶ್ವರ ಶಿಖರ ಮತ್ತು 90 ಮೀಟರ್ ಎತ್ತರದ ಮೋಹಿನಿ ಶಿಖರಗಳನ್ನು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯು (GSI) “ರಾಷ್ಟ್ರೀಯ ಪ್ರಾಮುಖ್ಯತೆಯ ಭೂಪಾರಂಪರಿಕ ತಾಣ” (Geoheritage Site of National Importance) ಎಂದು ಅಧಿಕೃತವಾಗಿ ಘೋಷಿಸಿದೆ.
ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯು ತನ್ನ 176ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಈ ಘೋಷಣೆ ಹೊರಬಿದ್ದಿದೆ. ಈ ಸಂಭ್ರಮದ ಭಾಗವಾಗಿ ದೇಶದ ಆಯ್ದ ಅಮೂಲ್ಯ ಭೂವೈಜ್ಞಾನಿಕ ತಾಣಗಳಿಗೆ ಈ ಗೌರವ ನೀಡಲಾಗಿದ್ದು, ಅದರಲ್ಲಿ ಯಾಣ ಮುಂಚೂಣಿಯಲ್ಲಿದೆ. ಈ ಮಹತ್ವದ ವಿಷಯವನ್ನು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ. ಪಾಟೀಲ್ ಅವರು ಹಂಚಿಕೊಂಡಿದ್ದಾರೆ.

2700 ಮಿಲಿಯನ್ ವರ್ಷಗಳ ಇತಿಹಾಸ
GSI ಅಧಿಕಾರಿಗಳು ನೀಡಿರುವ ತಾಂತ್ರಿಕ ವಿವರಗಳ ಪ್ರಕಾರ, ಯಾಣದ ಈ ಶಿಲೆಗಳು ಸಾಮಾನ್ಯ ಕಲ್ಲುಗಳಲ್ಲ ; ಈ ಶಿಲೆಗಳು ಸರಿಸುಮಾರು 2,700 ಮಿಲಿಯನ್ ವರ್ಷಗಳ ಹಿಂದೆ ರೂಪುಗೊಂಡಿವೆ ಎಂದು ಅಂದಾಜಿಸಲಾಗಿದೆ. ಇವುಗಳು ‘ಪ್ರಿಕೇಂಬ್ರಿಯನ್ ಡೋಲೊಮಿಟಿಕ್ ಸುಣ್ಣದ ಕಲ್ಲು’ಗಳಿಂದ (Precambrian dolomitic limestone) ಸೃಷ್ಟಿಯಾಗಿವೆ.
ಲಕ್ಷಾಂತರ ವರ್ಷಗಳ ಕಾಲ ಈ ಭಾಗದಲ್ಲಿ ಸುರಿದ ತೀವ್ರ ಮಳೆ (Tropical weathering) ಮತ್ತು ರಾಸಾಯನಿಕ ವಿಘಟನೆಯ (Chemical dissolution) ಫಲವಾಗಿ, ಈ ಶಿಲೆಗಳು ಇಂದು ನಾವು ಕಾಣುವ ವಿಶಿಷ್ಟವಾದ ‘ಕಾರ್ಸ್ಟ್’ (Karst) ಲಕ್ಷಣಗಳನ್ನು ಮತ್ತು ಆಕಾರಗಳನ್ನು ಪಡೆದುಕೊಂಡಿವೆ. ಈಶಿಲೆಗಳು ಕೇವಲ ತಮ್ಮ ವಿಶಿಷ್ಟ ರಚನೆ ಹಾಗೂ ಸೌಂದರ್ಯದ ದೃಷ್ಟಿಯಿಂದ ಅಷ್ಟೇ ಅಲ್ಲ, ಧಾರ್ಮಿಕವಾಗಿಯೂ ಮಹತ್ವ ಪಡೆದಿದೆ.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

ರಾಷ್ಟ್ರೀಯ ಪಟ್ಟಿಯಲ್ಲಿ ಯಾಣಕ್ಕೆ ಸ್ಥಾನ
ದೇಶಾದ್ಯಂತ ಭೂವೈಜ್ಞಾನಿಕವಾಗಿ ಅತ್ಯಂತ ಮಹತ್ವದ ಮತ್ತು ವಿಶಿಷ್ಟ ರಚನೆಯುಳ್ಳ ಸುಮಾರು 90 ತಾಣಗಳನ್ನು “ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕಗಳು” ಅಥವಾ “ಸಂಭವನೀಯ ಭೂಪಾರಂಪರಿಕ ತಾಣಗಳು” ಎಂದು ಜಿಎಸ್‌ಐ (GSI) ಗುರುತಿಸಿದೆ. ಈ ಪಟ್ಟಿಗೆ ಯಾಣದ ಸೇರ್ಪಡೆಯು ಅದರ ನೈಸರ್ಗಿಕ ಸೌಂದರ್ಯ ಮತ್ತು ಆಂತರಿಕ ಮೌಲ್ಯಕ್ಕೆ ಸಂದ ಗೌರವವಾಗಿದೆ.
“ಇಂತಹ ಭೂವೈಜ್ಞಾನಿಕ ನಿಧಿಗಳನ್ನು ಗುರುತಿಸುವುದು ಮತ್ತು ಅವುಗಳಿಗೆ ಮಾನ್ಯತೆ ನೀಡುವುದು ಭೂ-ಸಂರಕ್ಷಣೆಯ (Geoconservation) ಮೊದಲ ಹೆಜ್ಜೆಯಾಗಿದೆ. ಇದು ಮುಂದಿನ ಪೀಳಿಗೆಗೆ ಪ್ರಕೃತಿಯ ಈ ಅದ್ಭುತ ಪರಂಪರೆಯನ್ನು ಉಳಿಸಿಕೊಡಲು ಸಹಕಾರಿಯಾಗಲಿದೆ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾಣವು ದಶಕಗಳಿಂದಲೂ ಪ್ರವಾಸಿಗರನ್ನು ಸೆಳೆಯುತ್ತಿದೆ. ಇತ್ತೀಚಿಗೆ ಕರ್ನಾಟಕದ ಮೂಲೆ ಮೂಲೆಗಳಿಂದ ಪ್ರವಾಸಿಗರು ಈ ಕಪ್ಪು ಶಿಲೆಗಳ ಸೌಂದರ್ಯ ಸವಿಯಲು ಬರುತ್ತಿದ್ದಾರೆ. ಈ ನೂತನ ಮಾನ್ಯತೆಯಿಂದಾಗಿ ಯಾಣದ ಸಂರಕ್ಷಣೆಗೆ ಹೆಚ್ಚಿನ ಅನುದಾನ ಮತ್ತು ಅಂತರಾಷ್ಟ್ರೀಯ ಪ್ರವಾಸಿಗರ ಗಮನ ಹರಿಯುವ ನಿರೀಕ್ಷೆಯಿದೆ.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement