ಮುಡಾ ಸೈಟ್ ಹಂಚಿಕೆ ಹಗರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಡೆದಿರುವ ಪರ್ಯಾಯ ಸೈಟ್ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮುಖಂಡ ಎನ್.ಆರ್​. ರಮೇಶ ಶನಿವಾರ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಸಿದ್ದರಾಮಯ್ಯ ಅವರು ಹಣಕಾಸು ಸಚಿವ, ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯಾಗಿದ್ದ ವೇಳೆ ಭೂಹಗರಣ ಮತ್ತು ಮುಡಾ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಎನ್.ಆರ್​. ರಮೇಶ್ ಅವರು 400ಕ್ಕೂ ಹೆಚ್ಚು ಪುಟಗಳ ದಾಖಲೆಗಳ ಸಮೇತ ದೂರು ನೀಡಿ, ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಲೋಕಾಯುಕ್ತಕ್ಕೆ ದೂರು ನೀಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, 1997-98ರಲ್ಲಿ ಜೆ.ಎಚ್​. ಪಟೇಲ್​ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಸ್ವಾಧೀನಪಡಿಸಿಕೊಂಡ ದೇವನೂರು ಮೂರನೇ ಬಡಾವಣೆಯನ್ನು ಮುಡಾ ಕೈ ಬಿಡುವಂತೆ ಅಧಿಸೂಚನೆ ಹೊರಡಿಸುವಂತೆ ಪ್ರಭಾವ ಬೀರಿ ದುರುಪಯೋಗಪಡಿಸಿಕೊಂಡಿದ್ದಾರೆ. 2004-05ರಲ್ಲಿ ಧರ್ಮಸಿಂಗ್ ಸರ್ಕಾರದಲ್ಲಿಯೂ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಇದೇ ಭೂಮಿಯನ್ನು ಮೃತ ವ್ಯಕ್ತಿಯ ಹೆಸರಿನಲ್ಲಿ ಭೂ ಪರಿವರ್ತನೆ ಮಾಡಿಸಿದ್ದರು ಎಂದು ಆರೋಪಿಸಿದ್ದಾರೆ.

ಮೊದಲನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದ ವೇಳೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಮೈಸೂರಿನ ವಿಜಯನಗರದ 2 ಮತ್ತು 3 ಬಡಾವಣೆಯಲ್ಲಿ ಸುಮಾರು 39 ಸಾವಿರ ಚದರ ಅಡಿ​ನ 14 ನಿವೇಶನಗಳನ್ನು ಬದಲಿ ನಿವೇಶನ ಹೆಸರಿನಲ್ಲಿ ತಮ್ಮ ಪತ್ನಿಯ ಹೆಸರಿಗೆ ಮಾಡುವಂತೆ ಮುಡಾ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳುತ್ತಾರೆ. ನಂತರ 2022ರಲ್ಲಿ ವಿಪಕ್ಷದ ನಾಯಕರಾಗಿದ್ದ ಸಮಯದಲ್ಲಿ ಈ 14 ನಿವೇಶನಗಳನ್ನು ತಮ್ಮ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದಾರೆ. ದೇವನೂರು ಬಡವಾಣೆಯಲ್ಲಿ ಒಂದು ನಿವೇಶನ ಬೆಲೆ 5-6 ಕೋಟಿ ಇದ್ದರೆ, ವಿಜಯನಗರದಲ್ಲಿನ 14 ಬಡವಾಣೆಯಗಳ ಬೆಲೆ ಸುಮಾರು 50-60 ಕೋಟಿ ರೂ. ಇದೆ. ಒಟ್ಟಿನಲ್ಲಿ ಪ್ರಭಾವಿ ಹುದ್ದೆಯಲ್ಲಿರುವಾಗಲೇ ಸಿದ್ದರಾಮಯ್ಯ ಅವರು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಹೀಗಾಗಿ ಅವರ ಹಾಗೂ ಆ ಸಮಯದಲ್ಲಿ ಮೂಡಾದಲ್ಲಿದ್ದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ ಎಂದು ತಿಳಿಸಿದರು.
ರಮೇಶ ಅವರು ದೂರು ಸಲ್ಲಿಸುವ ಜೊತೆಗೆ 400ಕ್ಕೂ ಹೆಚ್ಚು ಪುಟಗಳ ದಾಖಲೆ ಹಾಗೂ ‘ಪುರಾವೆ’ ಸಲ್ಲಿಸಿದ್ದಾರೆ. ಈ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮುಡಾ ಸೈಟ್​ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧವೇ ಆರೋಪಗಳು ಕೇಳಿ ಬಂದಿದ್ದು, ಈ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ವಿಪಕ್ಷಗಳು ಸದನದ ಒಳಗೆ ಮತ್ತು ಹೊರಗೆ ತೀವ್ರ ಹೋರಾಟ ನಡೆಸುತ್ತಿವೆ.

ಪ್ರಮುಖ ಸುದ್ದಿ :-   ಕಡೂರು| ದುಷ್ಕರ್ಮಿಗಳಿಂದ ಹಸುವಿನ ಕೆಚ್ಚಲು ಕತ್ತರಿಸಿ ಕ್ರೌರ್ಯ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement