ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ಮೂರು ಅಭ್ಯರ್ಥಿಗಳ ಗೆಲುವು, ಸಿಎಂ ಬೊಮ್ಮಾಯಿಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ

ಬೆಂಗಳೂರು: ರಾಜ್ಯಸಭೆ ಚುನಾವಣೆಯ ಮೂರು ಸ್ಥಾನಗಳಲ್ಲಿ ಬಿಜೆಪಿ ಗೆಲುವಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಪ್ರಧಾನಿಯ ಕರೆಯನ್ನು ಬಿ.ಎಸ್.ಯಡಿಯೂರಪ್ಪ ಅವರಿಗೆ ನೀಡಲು ಬೊಮ್ಮಾಯಿ ಮುಂದಾದರು. ಆದರೆ ಯಡಿಯೂರಪ್ಪ ಅವರು, ನೀವೇ ಮಾತನಾಡಿ ಎಂದು ಬೆನ್ನು ತಟ್ಟಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬೊಮ್ಮಾಯಿ, ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪ್ರಧಾನಿ ಮೋದಿ, ಅಧ್ಯಕ್ಷರಾದ ಜೆ.ಪಿ.ನಡ್ಡಾ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ರಾಜ್ಯದ ಎಲ್ಲಾ ಶಾಸಕರು ಹಾಗೂ ಸಚಿವರಿಗೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು.

ರಾಜ್ಯಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರೆ ಮಾಡಿ ಸುಮಾರು 5 ನಿಮಿಷಗಳ ಕಾಲ ಮಾತನಾಡಿದರು. ಗೆಲುವಿಗಾಗಿ ಅಭಿನಂದನೆ ಸಲ್ಲಿಸಿದರು.
ಗೆಲುವಿನ ನಂತರ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಸಿ.ಟಿ.ರವಿ, ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ತಂತ್ರಗಾರಿಕೆ ಯಶಸ್ವಿಯಾಗಿದೆ. ನಿರೀಕ್ಷೆಗಿಂತ ನಮಗೆ ಎರಡು ಮತಗಳು ಹೆಚ್ಚಾಗಿಯೆ ಸಿಕ್ಕಿವೆ. ಕಾಂಗ್ರೆಸ್‌, ಜೆಡಿಎಸ್‌ನ ಇಬ್ಬರು ನಮ್ಮ ಪರ ಮತ ಹಾಕಿದ್ದಾರೆ. ದೊಡ್ಡದೊಡ್ಡ ನಾಯಕರೇ ನಮಗೆ ಬೆಂಬಲ ನೀಡಿದ್ದಾರೆ. ಆ ದೊಡ್ಡ ನಾಯಕರು ಯಾರೆಂದು ನಾನು ಹೇಳುವುದಿಲ್ಲ. ದೇಶದ ಹಿತದೃಷ್ಟಿಯಿಂದ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ ಎಂದು ನುಡಿದರು.

ಪ್ರಮುಖ ಸುದ್ದಿ :-   ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ : ಅಪಹರಣ ಪ್ರಕರಣ ದಾಖಲು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement