ಕಾಂವಡ್ ಯಾತ್ರೆ ಮಾರ್ಗದಲ್ಲಿ ಅಂಗಡಿ ಮಾಲೀಕರ ಹೆಸರು ಪ್ರದರ್ಶಿಸಬೇಕೆಂಬ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ

ನವದೆಹಲಿ: ಕಾಂವಡ್ ಯಾತ್ರೆಯ ಸಂದರ್ಭದಲ್ಲಿ ಅಂಗಡಿ ಮಾಲೀಕರು ತಮ್ಮ ಹೆಸರು ಮತ್ತು ವಿವರಗಳನ್ನು ಅಂಗಡಿಗಳ ಹೊರಗೆ ಪ್ರದರ್ಶಿಸುವಂತೆ ಉತ್ತರ ಪ್ರದೇಶ ಸರ್ಕಾರ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ತಡೆ ನೀಡಿದೆ.
ಈ ಸಂಬಂಧ ಉತ್ತರ ಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ ಜೊತೆಗೆ ಕಾಂವಡ್ ಯಾತ್ರೆ ನಡೆಯುವ ಉಳಿದ ರಾಜ್ಯಗಳಿಗೆ ನ್ಯಾಯಮೂರ್ತಿಗಳಾದ ಹೃಷಿಕೇಶ ರಾಯ್ ಮತ್ತು ಎಸ್‌.ವಿ.ಎನ್. ಭಟ್ಟಿ ಅವರಿದ್ದ ಪೀಠ ನೋಟಿಸ್ ಜಾರಿ ಮಾಡಿದ್ದು, ಜುಲೈ 26ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.
ನೋಟಿಸ್‌ಗೆ ಪ್ರತಿಕ್ರಿಯೆ ದೊರೆಯುವವರೆಗೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸುವುದು ಸೂಕ್ತ ಎಂದು ಹೇಳಿರುವ ಪೀಠ, ಕಾಂವಡ್‌ ಯಾತ್ರೆ ಮಾಡುವವರಿಗೆ ತಮ್ಮಲ್ಲಿ ದೊರೆಯುವ ಆಹಾರ ಪ್ರಕಾರಗಳನ್ನು ಮಾರಾಟಗಾರರು ಪ್ರದರ್ಶಿಸಬೇಕಾಗುತ್ತದೆ. ಆದರೆ ಅವರ ಹೆಸರು ಬಹಿರಂಗಪಡಿಸುವಂತೆ ಬಲವಂತ ಮಾಡುವಂತಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ.

ಕಾಂವಡ್ ಯಾತ್ರೆಯ ಮಾರ್ಗಗಳಲ್ಲಿ ಆಹಾರ ಮತ್ತು ಪಾನೀಯ ಅಂಗಡಿಗಳು ತಮ್ಮ ಸಂಸ್ಥೆಗಳ ನಿರ್ವಾಹಕರು/ಮಾಲೀಕರ ಹೆಸರು ಮತ್ತು ಗುರುತನ್ನು ಪ್ರದರ್ಶಿಸುವಂತೆ ಮುಜಫರ್‌ನಗರದಲ್ಲಿ ಉತ್ತರ ಪ್ರದೇಶ ಪೊಲೀಸರು ಇತ್ತೀಚೆಗೆ ನೀಡಿದ್ದ ನಿರ್ದೇಶನವನ್ನು ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು.
ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್ ಆಫ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್), ಸಂಸದೆ ಮಹುವಾ ಮೊಯಿತ್ರಾ, ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಅಪೂರ್ವಾನಂದ ಹಾಗೂ ಸಾಮಾಜಿಕ ಹೋರಾಟಗಾರ ಆಕಾರ ಪಟೇಲ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಂತಹ ನಿರ್ದೇಶನವನ್ನು ಜಾರಿಗೆ ಯಾವುದೇ ಔಪಚಾರಿಕ ಆದೇಶ ನೀಡಲಾಗಿದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿತು.
ಸರ್ಕಾರೇತರ ಸಂಸ್ಥೆ ಪರ ವಾದ ಮಂಡಿಸಿದ ಹಿರಿಯ ವಕೀಲ ಚಂದರ ಉದಯ್ ಸಿಂಗ್ ಅಧಿಕಾರಿಗಳು ಸ್ವಯಂ ಪ್ರೇರಣೆಯಿಂದ ಆದೇಶ ಜಾರಿಗೊಳಿಸುತ್ತಿದ್ದಾರೆ. ಇದರಿಂದ ಸಣ್ಣಪುಟ್ಟ ವ್ಯಾಪಾರಿಗಳು ತೊಂದರೆ ಅನುಭವಿಸುತ್ತಾರೆ ಎಂದು ದೂರಿದರು.

ಪ್ರಮುಖ ಸುದ್ದಿ :-   ಕಾವ್ಯಾ ಮಾರನ್-ಅನಿರುದ್ಧ ರವಿಚಂದರ ಮದುವೆಗೆ ಮುಹೂರ್ತ ಫಿಕ್ಸ್

ಮಹುವಾ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ, ಯಾತ್ರಿಗಳ ಮಾರ್ಗದಲ್ಲಿ ಮುಸ್ಲಿಮರು ಸೇರಿದಂತೆ ಎಲ್ಲಾ ಧರ್ಮದ ಜನ ಸಹಾಯ ಮಾಡುತ್ತಾರೆ. ಈಗ ಇವರನ್ನು ಬಹಿಷ್ಕರಿಸುವ ಯತ್ನ ನಡೆದಿದೆ. ಹಿಂದೂಗಳು ನಡೆಸುತ್ತಿರುವ ಅನೇಕ ಸಸ್ಯಾಹಾರಿ ರೆಸ್ಟರಂಟ್‌ಗಳಲ್ಲಿ ಮುಸ್ಲಿಂ ಉದ್ಯೋಗಿಗಳಿರುತ್ತಾರೆ. ಅಲ್ಲಿ ತಿನ್ನುವುದಿಲ್ಲ ಎಂದು ಹೇಳುತ್ತಾರೆಯೇ. ಚಾಣಾಕ್ಷತೆಯಿಂದಲೇ ಈ ಆದೇಶಗಳನ್ನು ಕಾನೂನು ಅಧಿಕಾರ ಇಲ್ಲದೆ ಹೊರಡಿಸಲಾಗಿದೆ. ಈ ಆದೇಶದ ತಾರ್ಕಿಕತೆ ಏನು ಎಂದು ಪ್ರಶ್ನಿಸಿದರು. ಈ ರೀತಿ ಮಾಡುವುದರಿಂದ ನೂರಾರು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಈ ಯಾತ್ರೆ ಇಂದಿನಿಂದ ನಡೆಯುತ್ತಿರುವುದಲ್ಲ, ಅದಕ್ಕೆ ಸ್ವಾತಂತ್ರ್ಯ ಪೂರ್ವದ ಇತಿಹಾಸ ಇದೆ ಎಂದು ಸಿಂಘ್ವಿ ವಾದಿಸಿದರು.
ಪ್ರೊಫೆಸರ್ ಅಪೂರ್ವಾನಂದ ಮತ್ತು ಪಟೇಲ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹುಝೆಫಾ ಅಹ್ಮದಿ, ಪೊಲೀಸರು ನೀಡಿದ ನಿರ್ದೇಶನಗಳನ್ನು ಜಾರಿಗೊಳಿಸುವ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೀಡಿದ ಹೇಳಿಕೆಯನ್ನು ಪ್ರಸ್ತಾಪಿಸಿದರು. ಇದು ಜಾತ್ಯತೀತತೆ ಮತ್ತು ಭ್ರಾತೃತ್ವದ ಆಶಯಗಳನ್ನು ಉಲ್ಲಂಘಿಸುತ್ತದೆ ಎಂದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement