ಡ್ರೈವಿಂಗ್‌ ಲೈಸೆನ್ಸ್‌ ನಿಯಮಗಳಲ್ಲಿ ಹಲವು ಬದಲಾವಣೆಗೆ ಮುಂದಾದ ಸರ್ಕಾರ

ನವದೆಹಲಿ : ವಾಹನ ಚಾಲನಾ ಪರವಾನಗಿ ಪಡೆಯುವ ನಿಯಮಗಳಲ್ಲಿ ಮಹತ್ವದ ಸುಧಾರಣೆಗಳನ್ನು ತರಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮುಂದಾಗಿದೆ.
‘ಸುರಕ್ಷಿತ ಚಾಲನಾ ಟ್ಯುಟೋರಿಯಲ್’ ಮೌಲ್ಯಮಾಪನ ಪರೀಕ್ಷೆಯನ್ನು ಕಠಿಣಗೊಳಿಸುವ ನಿಟ್ಟಿನಲ್ಲಿ ಈ ಮೊದಲು ತೇರ್ಗಡೆಯಾಗಲು ಅಗತ್ಯವಿದ್ದ ಶೇ. 60 ಅಂಕಗಳ ಬದಲಿಗೆ, ಇನ್ನು ಮುಂದೆ ಕನಿಷ್ಠ ಶೇ. 75 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಲಿದೆ. ಜೊತೆಗೆ ಈ ಟ್ಯುಟೋರಿಯಲ್ ಅವಧಿಯು ಕನಿಷ್ಠ 30 ನಿಮಿಷಗಳ ಕಾಲ ಇರಲಿದೆ.
ಇದೇ ವೇಳೆ, ಆಧಾರ್ ದೃಢೀಕರಣದ ಮೂಲಕ ಪೂರ್ಣಗೊಳಿಸುವ ಆಯ್ದ ಆನ್‌ಲೈನ್ ಚಾಲನಾ ಪರವಾನಗಿ ಸೇವೆಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲು ಉದ್ದೇಶಿಸಲಾಗಿದೆ.
ಚಾಲನಾ ಪರವಾನಗಿ ಪಡೆಯುವ ಪ್ರಕ್ರಿಯೆಯಲ್ಲಿ ಮೌಲ್ಯಮಾಪನದ ಮಾನದಂಡಗಳನ್ನು ಇನ್ನಷ್ಟು ಕಠಿಣಗೊಳಿಸುವ ಉದ್ದೇಶದಿಂದ ಈ ಬದಲಾವಣೆಗಳನ್ನು ಪ್ರಸ್ತಾಪಿಸಲಾಗಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (MoRTH) ಕೇಂದ್ರ ಮೋಟಾರು ವಾಹನಗಳ ನಿಯಮಗಳಿಗೆ ತಿದ್ದುಪಡಿ ತರಲು ಸಿದ್ಧಪಡಿಸಿರುವ ಕರಡು ಪ್ರಸ್ತಾವನೆಯಲ್ಲಿ, ಸುರಕ್ಷಿತ ಚಾಲನಾ ತರಬೇತಿ ಅವಧಿ ಕನಿಷ್ಠ 30 ನಿಮಿಷಗಳಿರಬೇಕು ಎಂದು ಸೂಚಿಸಲಾಗಿದೆ. ಪ್ರಸ್ತುತ ಶೇ. 60ರಷ್ಟಿರುವ ಉತ್ತೀರ್ಣ ಅಂಕಗಳ ಮಿತಿಯನ್ನು ಶೇ. 75ಕ್ಕೆ ಹೆಚ್ಚಿಸುವ ಪ್ರಸ್ತಾವನೆಯೂ ಇದರಲ್ಲಿದೆ.

ಪ್ರಮುಖ ಸುದ್ದಿ :-   ತಾಯಿ ಆರೋಗ್ಯಕ್ಕಾಗಿ ಶಿವನಿಗೆ ಹರಕೆ : ಓಡಿ 12 ಜ್ಯೋತಿರ್ಲಿಂಗಗಳ ದರ್ಶನಕ್ಕೆ ನಿರ್ಧಾರ; ದಿನಕ್ಕೆ 50 ಕಿಮೀ ಓಡುತ್ತಿರುವ ಯುವಕ !

ಚಾಲನಾ ಪರವಾನಗಿಯಲ್ಲಿರುವ ಹೆಸರು, ವಿಳಾಸ ಸೇರಿದಂತೆ ವೈಯಕ್ತಿಕ ವಿವರಗಳನ್ನು ಬದಲಾಯಿಸಲು ಸಲ್ಲಿಸಲಾಗುವ ಅರ್ಜಿಗಳ ವಿಲೇವಾರಿಗೂ ಕಾಲಮಿತಿ ನಿಗದಿಪಡಿಸಲು ಸಚಿವಾಲಯ ಉದ್ದೇಶಿಸಿದೆ. ಇಂತಹ ಅರ್ಜಿಗಳನ್ನು ಸ್ವೀಕರಿಸಿದ ಪರವಾನಗಿ ಪ್ರಾಧಿಕಾರಗಳು 15 ದಿನಗಳೊಳಗೆ ಅವುಗಳನ್ನು ಅನುಮೋದಿಸಬೇಕು ಅಥವಾ ತಿರಸ್ಕರಿಸಬೇಕು. ಅರ್ಜಿಯನ್ನು ತಿರಸ್ಕರಿಸಿದರೆ ಅದಕ್ಕೆ ಸೂಕ್ತ ಕಾರಣಗಳನ್ನೂ ತಿಳಿಸಬೇಕು ಎಂದು ಕರಡು ನಿಯಮಗಳಲ್ಲಿ ಪ್ರಸ್ತಾಪಿಸಲಾಗಿದೆ.
ಇದಲ್ಲದೆ, ಚಾಲನಾ ಪರವಾನಗಿಯಲ್ಲಿ ಅರ್ಜಿದಾರರ ಹೆಸರು, ವಿಳಾಸ ಸೇರಿದಂತೆ ವೈಯಕ್ತಿಕ ವಿವರಗಳನ್ನು ಬದಲಾಯಿಸುವ ಸೇವೆಗಳಿಗೆ ವಿಧಿಸಲಾಗುವ ಶುಲ್ಕವನ್ನು ತೆಗೆದುಹಾಕುವ ಪ್ರಸ್ತಾವನೆಯನ್ನೂ ಸಚಿವಾಲಯ ಮುಂದಿಟ್ಟಿದೆ.

ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸುವವರು ತಮ್ಮ ಗುರುತು, ವಯಸ್ಸು ಮತ್ತು ವಾಸಸ್ಥಳವನ್ನು ದೃಢೀಕರಿಸಲು ಸಲ್ಲಿಸಬಹುದಾದ ದಾಖಲೆಗಳನ್ನೂ ಕರಡು ನಿಯಮಗಳಲ್ಲಿ ಸ್ಪಷ್ಟಪಡಿಸಲಾಗಿದೆ. ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ, ಇ-ಪಡಿತರ ಚೀಟಿ ಹಾಗೂ ಜನನ ಪ್ರಮಾಣಪತ್ರ ಸೇರಿದಂತೆ ವಿವಿಧ ದಾಖಲೆಗಳನ್ನು ಇದಕ್ಕಾಗಿ ಬಳಸಬಹುದು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.
ಇನ್ನು ಮುಂದೆ ಪರವಾನಗಿ ಪ್ರಾಧಿಕಾರದಿಂದ ವಿತರಿಸಲಾಗುವ ಅಥವಾ ನವೀಕರಿಸಲಾಗುವ ಪ್ರತಿಯೊಂದು ಚಾಲನಾ ಪರವಾನಗಿಯೂ ನಮೂನೆ-7ರಲ್ಲಿ (Form 7) ಲ್ಯಾಮಿನೇಟ್ ಮಾಡಿದ ಕಾರ್ಡ್ ಅಥವಾ ಪಾಲಿವಿನೈಲ್ ಕ್ಲೋರೈಡ್ (PVC) ಕಾರ್ಡ್ ರೂಪದಲ್ಲಿರಬೇಕು ಎಂಬುದನ್ನೂ ಕರಡು ನಿಯಮಗಳು ಸೂಚಿಸಿವೆ.
ಈ ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಹಾಗೂ ಇತರ ಪಾಲುದಾರರು ತಮ್ಮ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸಲ್ಲಿಸಲು ಅಧಿಸೂಚನೆ ಪ್ರಕಟವಾದ ದಿನದಿಂದ 30 ದಿನಗಳ ಕಾಲಾವಕಾಶ ನೀಡಲಾಗಿದೆ. ಸ್ವೀಕೃತವಾಗುವ ಸಲಹೆ ಮತ್ತು ಆಕ್ಷೇಪಣೆಗಳನ್ನು ಪರಿಗಣಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

ಪ್ರಮುಖ ಸುದ್ದಿ :-   ‘ನಾನು ಟ್ರಾವೆಲ್ ಏಜೆಂಟ್‌ ಅಲ್ಲ’ : ರಾಹುಲ್ ಗಾಂಧಿ ವಿದೇಶ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದ ಶಶಿ ತರೂರ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement