ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಗಡುವು ವಿಸ್ತರಣೆ ಮಾಡಿದ ಚುನಾವಣಾ ಆಯೋಗ

ನವದೆಹಲಿ: 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಗಡುವನ್ನು ಫೆಬ್ರವರಿ 14 ರವರೆಗೆ ವಿಸ್ತರಿಸಲಾಗಿದೆ ಎಂದು ಚುನಾವಣಾ ಆಯೋಗ (EC) ತಿಳಿಸಿದೆ.
‘ಎಸ್ಐಆರ್’ (SIR) ನಾಳೆಯಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ವಿರೋಧ ಪಕ್ಷಗಳೊಂದಿಗೆ ಭಾರೀ ಪ್ರತಿಭಟನೆ ಮತ್ತು ಗದ್ದಲಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಚುನಾವಣಾ ಆಯೋಗವು ಭಾನುವಾರ ಹೊರಡಿಸಿದ ಮೂರು ಪುಟಗಳ ಆದೇಶದಲ್ಲಿ, ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲು ಚುನಾವಣಾ ಅಧಿಕಾರಿಗಳಿಗೆ ಇನ್ನೂ ಒಂದು ವಾರ ಕಾಲಾವಕಾಶ ನೀಡಲಾಗಿದೆ ಎಂದು ಹೇಳಿದೆ. ಗಣತಿ ಪ್ರಕ್ರಿಯೆಯು ಡಿಸೆಂಬರ್ 4 ರ ಬದಲಿಗೆ ಡಿಸೆಂಬರ್ 11ಕ್ಕೆ ಕೊನೆಗೊಳ್ಳಲಿದೆ.
ಹೊಸ ಆದೇಶದಲ್ಲಿ, ಡಿಸೆಂಬರ್ 9 ರಂದು ಬಿಡುಗಡೆಯಾಗಬೇಕಿದ್ದ ಕರಡು ಮತದಾರರ ಪಟ್ಟಿಯನ್ನು ಈಗ ಡಿಸೆಂಬರ್ 16 ರಂದು ಪ್ರಕಟಿಸಲಾಗುವುದು ಮತ್ತು ಅಂತಿಮ ಪಟ್ಟಿಯನ್ನು ಫೆಬ್ರವರಿ 14 ರಂದು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಅಧಿಕಾರಿಗಳ ಮೇಲೆ ಒತ್ತಡದ ಆರೋಪ
ಈ ವಾರ ದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರನ್ನು ಭೇಟಿ ಮಾಡಿದ ತೃಣಮೂಲ ಕಾಂಗ್ರೆಸ್ (TMC) ಮತ್ತು ಇತರೆ ವಿಪಕ್ಷಗಳ ನಾಯಕರು, ‘ಎಸ್ಐಆರ್’ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಮರುಹೊಂದಿಸುವಂತೆ ಆಯೋಗಕ್ಕೆ ಒತ್ತಾಯಿಸಿದ್ದರು.
ಕಡಿಮೆ ಅವಧಿಯಲ್ಲಿ ಈ ಬೃಹತ್ ಕಾರ್ಯವನ್ನು ಪೂರ್ಣಗೊಳಿಸಲು ಮನೆ ಮನೆಗೆ ತೆರಳುತ್ತಿರುವ ಬೂತ್ ಮಟ್ಟದ ಅಧಿಕಾರಿಗಳ (Booth Level Officers – BLOs) ಮೇಲೆ ತೀವ್ರ ಒತ್ತಡವಿದೆ ಎಂಬ ವರದಿಗಳ ನಡುವೆಯೇ ವಿರೋಧ ಪಕ್ಷಗಳು ಈ ಮನವಿ ಮಾಡಿವೆ. ಈ ಒತ್ತಡದಿಂದಾಗಿ ಪಶ್ಚಿಮ ಬಂಗಾಳ, ತಮಿಳುನಾಡು, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಗಳಲ್ಲಿ ಕೆಲವು BLO ಗಳು ಆತ್ಮಹತ್ಯೆ ಮಾಡಿಕೊಂಡ ವರದಿಗಳು ಬಂದಿವೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ಪಶ್ಚಿಮ ಬಂಗಾಳದಲ್ಲಿ ಮೂರು ಹಂತದ ‘ಎಸ್ಐಆರ್’ ಪ್ರಕ್ರಿಯೆಯ ಮೊದಲ ಹಂತವು ಮುಕ್ತಾಯದ ಹಂತದಲ್ಲಿದೆ. ನವೆಂಬರ್ 29 ರ ಸಂಜೆಯವರೆಗೆ, ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿ 18.70 ಲಕ್ಷ ಮೃತ ಮತದಾರರು ಪಟ್ಟಿಯಲ್ಲಿ ಇನ್ನೂ ಉಳಿದಿರುವುದನ್ನು ಚುನಾವಣಾ ಆಯೋಗ ಗುರುತಿಸಿದೆ.
ಮತದಾರರ ಪಟ್ಟಿಯಿಂದ ಅಳಿಸಿಹಾಕಲು ಉದ್ದೇಶಿಸಲಾದ ಮತದಾರರ ಅಂದಾಜು ಸಂಖ್ಯೆಯನ್ನು ಚುನಾವಣಾ ಆಯೋಗ ಮತ್ತಷ್ಟು ಹೆಚ್ಚಿಸಿದ್ದು, ಈ ಸಂಖ್ಯೆ ಈಗ ಸುಮಾರು 35 ಲಕ್ಷ ಆಗಬಹುದು ಎಂದು ಐಎಎನ್‌ಎಸ್ (IANS) ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ 35 ಲಕ್ಷದಲ್ಲಿ 18.70 ಲಕ್ಷ ಮೃತ ಮತದಾರರು ಮಾತ್ರವಲ್ಲದೆ, ನಕಲಿ ಮತದಾರರು, ಪತ್ತೆಹಚ್ಚಲು ಸಾಧ್ಯವಾಗದ ಮತದಾರರು ಮತ್ತು ಬೇರೆ ರಾಜ್ಯಗಳಿಗೆ ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರು ಸೇರಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement