ನೈಜೀರಿಯಾ ಪ್ರಜೆಗಳನ್ನು ಬಂಧಿಸಿದ ದೆಹಲಿ ಪೊಲೀಸರ ಮೇಲೆ ಆಫ್ರಿಕನ್ನರ ದಾಳಿ

ನವದೆಹಲಿ: ವೀಸಾ ಅವಧಿ ಮುಗಿದ ಬಳಿಕವೂ ಭಾರತದಲ್ಲಿ ನೆಲೆಸಿದ್ದ ಆರೋಪದಲ್ಲಿ ಬಂಧಿಸಲಾಗಿದ್ದ ನೈಜೀರಿಯಾ ಪ್ರಜೆಗಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬರುವ ವೇಳೆ ಆಫ್ರಿಕನ್ ಪ್ರಜೆಗಳು ಗುಂಪುಗೂಡಿ ದಾಳಿ ನಡೆಸಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಬಂಧಿತರನ್ನು ಬಿಡುಗಡೆ ಮಾಡಿದ ಘಟನೆ ದಕ್ಷಿಣ ದಿಲ್ಲಿಯ ನೆಬ್ ಸರೈ ಪ್ರದೇಶದಲ್ಲಿ ಶನಿವಾರ ನಡೆದಿದೆ.
ದೆಹಲಿಯ ಮಾದಕವಸ್ತು ನಿಗ್ರಹ ಘಟಕದ ಪೊಲೀಸರು, ವೀಸಾ ಅವಧಿ ಮುಗಿದ ನಂತರವೂ ಭಾರತದಲ್ಲಿ ಉಳಿದುಕೊಂಡಿದ್ದ ನೈಜೀರಿಯಾದ ಮೂವರು ಪ್ರಜೆಗಳನ್ನು ಶನಿವಾರ ಮಧ್ಯಾಹ್ನ 2:30ರ ವೇಳೆಗೆ ನೆಬ್ ಸರೈನ ರಾಜು ಪಾರ್ಕ್‌ನಲ್ಲಿ ಬಂಧಿಸಿದ್ದರು.
ಆದರೆ, ಈ ಸುದ್ದಿ ತಿಳಿದ ನೂರಾರು ಆಫ್ರಿಕಾ ಮೂಲದ ಪ್ರಜೆಗಳು ಈ ಪೊಲೀಸರ ತಂಡವನ್ನು ಸುತ್ತುವರಿದರು. ಈ ಗದ್ದಲದಲ್ಲಿ, ಬಂಧಿತ ಮೂವರ ಪೈಕಿ ಇಬ್ಬರು ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗುವುದರಲ್ಲಿ ಯಶಸ್ವಿಯಾಗಿದ್ದಾರೆ. ಆದರೆ 22 ವರ್ಷದ ಫಿಲಿಪ್ ಎಂಬಾತನನ್ನು ಮತ್ತೆ ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.
ಶನಿವಾರ ಸಂಜೆ 6:30ರ ವೇಳೆಗೆ ರಾಜು ಪಾರ್ಕ್‌ಗೆ ಮತ್ತೆ ತೆರಳಿದ ನೆಬ್ ಸರೈ ಪೊಲೀಸ್ ಠಾಣೆ ಹಾಗೂ ಮಾದಕವಸ್ತು ನಿಗ್ರಹ ಪಡೆಯ ತಂಡ, ಒಬ್ಬ ಮಹಿಳೆ ಸೇರಿದಂತೆ ನಾಲ್ವರು ನೈಜೀರಿಯನ್ನರನ್ನು ಬಂಧಿಸಿತ್ತು.
ನಂತರ ಆಫ್ರಿಕಾ ಮೂಲದ 150- 200 ಜನರ ಗುಂಪು ಪುನಃ ಪೊಲೀಸ್ ತಂಡವನ್ನು ಸುತ್ತುವರಿದಿತ್ತು. ಬಂಧಿತರನ್ನು ಪರಾರಿಯಾಗಲು ಸಹಾಯ ಮಾಡಲು ಪ್ರಯತ್ನಿಸಿತ್ತು. ಸನ್ನಿವೇಶ ಕೈಮೀರುತ್ತಿರುವುದನ್ನು ಕಂಡ ಪೊಲೀಸರು ಅದನ್ನು ಹೇಗೋ ನಿಭಾಯಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಅಪರಾಧಿಗಳನ್ನು ನೆಬ್ ಸರೈ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಬಂಧಿತರನ್ನು ಗಡಿಪಾರು ಮಾಡಲು ಪ್ರಕ್ರಿಯೆ ನಡೆಸಲಾಗುತ್ತಿದೆ.

ಪ್ರಮುಖ ಸುದ್ದಿ :-   'ನಮ್ಮಲ್ಲಿಗೆ ಪ್ರವಾಸಕ್ಕೆ ಬನ್ನಿ, ನಮ್ಮ ಆರ್ಥಿಕತೆ ಬೆಂಬಲಿಸಿ' : ಹದಗೆಟ್ಟ ಸಂಬಂಧಗಳ ಮಧ್ಯೆ ಭಾರತದ ಪ್ರವಾಸಿಗರಿಗೆ ಮನವಿ ಮಾಡಿದ ಮಾಲ್ಡೀವ್ಸ್ ಸರ್ಕಾರ

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement