ಮೈಸೂರು: 2023ರ ವಿಧಾನಸಭಾ ಚುನಾವಣೆಯೇ ನನ್ನ ಕೊನೆಯ ಚುನಾವಣೆಯಾಗಿದೆ. ಆ ಬಳಿಕ ಸಕ್ರೀಯ ರಾಜಕಾರಣದಿಂದ ದೂರ ಉಳಿಯಲಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಣೆ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ರ ವಿಧಾನಸಭಾ ಚುನಾವಣೆಯಲ್ಲಿ ಮಾತ್ರ ಸ್ಪರ್ಧಿಸಲಿದ್ದು, ಇದು ನನ್ನ ಕೊನೆಯ ಚುನಾವಣೆಯಾಗಿದೆ. ನಂತರ ಯಾವುದೇ ಚುನಾವಣೆ ರಾಜಕೀಯದಿಂದ ದೂರ ಸರಿಯಲಿದ್ದೇನೆ. ಯಾವುದೇ ಹುದ್ದೆ ಕೊಟ್ಟರೂ ನಾನು ಸ್ವೀಕರಿಸುವುದಿಲ್ಲ, ರಾಜ್ಯಸಭೆ ಸೇರಿ ಯಾವುದೇ ಸದಸ್ಯತ್ವವನ್ನೂ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರ ನನ್ನನ್ನು ಸೋಲಿಸಿದ್ದಾರೆ, ಆದರೆ ಗೆಲುವನ್ನೂ ನೀಡಿದ್ದಾರೆ. ನಾನು ಸೋಲು-ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸುತ್ತೇನೆ ಎಂದ ಅವರು, 2023ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದರು.
ಎಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಕೋಲಾರ, ಹುಣಸೂರು, ವರುಣಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ ಎಂದರು.
ನಿಮ್ಮ ಕಾಮೆಂಟ್ ಬರೆಯಿರಿ