ನವದೆಹಲಿ: ಧರ್ಮಸ್ಥಳದಲ್ಲಿ ಕೊಲೆಯಾದ ನೂರಾರು ಶವಗಳನ್ನು ಹೂತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ ಡಿ ಅವರ ವಿರುದ್ಧ ಯಾವುದೇ ಮಾನಹಾನಿ ವಿಷಯ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ವಿಧಿಸಿದ್ದ ನಿರ್ಬಂಧ ಪ್ರಶ್ನಿಸಿ ಥರ್ಡ್ ಐ ಯೂಟ್ಯೂಬ್ ಚಾನೆಲ್ ಸಲ್ಲಿಸಿದ್ದ ಅರ್ಜಿಯನ್ನು ನೇರವಾಗಿ ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ವರದಿ ಪ್ರಕಾರ, ಮಾಧ್ಯಮಗಳ ಮೇಲಿನ ನಿರ್ಬಂಧದ ಆದೇಶ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿಗಳಾದ ವಿನೋದ್ ಚಂದ್ರನ್ ಮತ್ತು ಜೊಯಮಲ್ಯ ಬಾಗ್ಚಿ ಅವರ ಪೀಠವು ಈ ವಿಷಯದ ಬಗ್ಗೆ ಮೊದಲಿಗೆ ಕರ್ನಾಟಕ ಹೈಕೋರ್ಟ್‌ಗೆ ಅರ್ಕಿ ಸಲ್ಲಿಸಿ ಎಂದು ಥರ್ಡ್ ಐ ಯೂಟ್ಯೂಬ್ ಚಾನೆಲ್‌ಗೆ ಸೂಚಿಸಿದೆ.
ವಿಚಾರಣೆ ವೇಳೆ, ಥರ್ಡ್ ಐ ಪರ ವಕೀಲರು, “9,000 ವೀಡಿಯೊ ಲಿಂಕ್‌ಗಳನ್ನು ತೆಗೆದುಹಾಕಲು ಹೇಳಲಾಗಿದೆ. ಇದು ಮಾಧ್ಯಮ ನಿರ್ಬಂಧಕ ಆದೇಶ” ಎಂದು ವಾದಿಸಿದರು. ಆಗ ಮುಖ್ಯ ನ್ಯಾಯಮುರ್ತಿ ಗವಾಯಿ ಅವರು, “ಮೊದಲು ಹೈಕೋರ್ಟ್‌ಗೆ ಹೋಗಿ, ಆನಂತರ ಇಲ್ಲಿಗೆ ಬನ್ನಿ. ನಮ್ಮ ಹೈಕೋರ್ಟ್‌ಗಳನ್ನು ನಿರುತ್ತೇಜನಗೊಳಿಸಲಾಗದು” ಎಂದು ಹೇಳಿದರು.
ಹರ್ಷೇಂದ್ರಕುಮಾರ ಅವರು ತಪ್ಪಾಗಿ ವಿಷಯವನ್ನು ನಿರೂಪಿಸುವ ಮೂಲಕ ಹಾಗೂ ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗದ ಮೂಲಕ ಸೆಷನ್ಸ್ ನ್ಯಾಯಾಲಯದಿಂದ ಮಾಧ್ಯಮಗಳನ್ನು ನಿರ್ಬಂಧಿಸುವ ಆದೇಶ ಪಡೆದಿದ್ದಾರೆ ಎನ್ನುವುದು ಥರ್ಡ್ ಐ ಯೂಟ್ಯೂಬ್ ಚಾನೆಲ್‌ನ ವಾದವಾಗಿದೆ. “ಇದು ವಾಕ್ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯ (ವಿಧಿ 19(1)(ಎ)) ಮತ್ತು ಸಹಜ ನ್ಯಾಯತತ್ವ ಮತ್ತು ನ್ಯಾಯಿಕ ಪ್ರಕ್ರಿಯೆಗಳ (ವಿಧಿ 21 ಮೇಲಿನ ನೇರ ದಾಳಿಯಾಗಿದೆ” ಎಂದು ಅರ್ಜಿದಾರರು ಆರೋಪಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ