ಮಂಗಳೂರು: ಯಕ್ಷಗಾನದ ತೆಂಕುತಿಟ್ಟಿನ ಹಿರಿಯ ಭಾಗವತ ದಿನೇಶ ಅಮ್ಮಣ್ಣಾಯ(65) ಅವರು ಇಂದು, ಗುರುವಾರ (ಅಕ್ಟೋಬರ್ ೧೬) ವಿಧಿವಶರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಳ್ತಂಗಡಿಯ ಅರಸಿನಮಕ್ಕಿಯ ಸ್ವಗೃಹದಲ್ಲಿ ಗುರುವಾರ ಕೊನೆಯುಸಿರೆಳೆದಿದ್ದಾರೆ. ತೆಂಕುತಿಟ್ಟು ಯಕ್ಷಗಾನ (Yakshagana) ಪರಂಪರೆಯ ಹಿರಿಯ ಭಾಗವತರಾಗಿ ನಾಲ್ಕು ದಶಕಕ್ಕೂ ಹೆಚ್ಚು ಕಾಲ ಕಲಾ ಸೇವೆ ಸಲ್ಲಿಸಿದ್ದ ಅಮ್ಮಣ್ಣಾಯ ಅವರು ‘ರಸರಾಗ ಚಕ್ರವರ್ತಿ’ ಎಂಬ ಬಿರುದು ಹೊಂದಿದ್ದರು.
ದಿನೇಶ ಅಮ್ಮಣ್ಣಾಯ (Dinesh Ammannaya) ಅವರು ಖ್ಯಾತ ಭಾಗವತ ದಾಮೋದರ ಮಂಡೆಚ್ಚ ಅವರ ಆಪ್ತ ಶಿಷ್ಯರಾಗಿದ್ದರು. ಪುತ್ತೂರು ಮೇಳದಲ್ಲಿ ಚಂಡೆ ಮತ್ತು ಮದ್ದಳೆ ವಾದಕರಾಗಿ ಯಕ್ಷಗಾನ ಲೋಕಕ್ಕೆ ಕಾಲಿಟ್ಟ ಅವರು ನಂತರ ಭಾಗವತಿಕೆಯತ್ತ ತಮ್ಮ ಆಸಕ್ತಿ ಬೆಳೆಸಿಕೊಂಡು ಅದರಲ್ಲಿ ಪ್ರಖ್ಯಾತಿ ಗಳಿಸಿದರು.
ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ರೂಪಿಸಿಕೊಂಡು ಯಶಸ್ವಿಯಾಗಿ ಅಗ್ರಮಾನ್ಯ ಭಾಗವತರಾದರು. ‘ಸತ್ಯಹರಿಶ್ಚಂದ್ರ’ ಪ್ರಸಂಗದ ಹಾಡುಗಳ ಮೂಲಕ ಯಕ್ಷಾಭಿಮಾನಿಗಳ ಮನೆ ಮಾತಾಗಿದ್ದರು. ಕರ್ನಾಟಕ ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದರು. ದಿಗ್ಗಜ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಕೀರ್ತಿ ಅಮ್ಮಣ್ಣಾಯರಿಗೆ ಸಲ್ಲುತ್ತದೆ. ಎಡನೀರು ಮಠದ ಪರಮಶಿಷ್ಯರಾದ ಅಮ್ಮಣ್ಣಾಯರು ತಮ್ಮ ಜೀವನ ಅತೀ ಹೆಚ್ಚು ಯಕ್ಷಗಾನ ಭಾಗವತಿಕೆಯನ್ನು ಎಡನೀರು ಮಠದ ಮೇಳದಲ್ಲಿ ಮಾಡಿದ್ದಾರೆ.
ಅಮ್ಮಣ್ಣಾಯರು ಕೇವಲ ಪೌರಾಣಿಕ ಪ್ರಸಂಗಗಳಿಗಷ್ಟೇ ಅಲ್ಲದೆ, ಅನೇಕ ತುಳು ಪ್ರಸಂಗಗಳಲ್ಲಿಯೂ ಅವರು ಭಾಗವತಿಕೆ ಮಾಡಿ ಜನಪ್ರಿಯತೆ ಗಳಿಸಿದ್ದರು. ‘ಕಾಡಮಲ್ಲಿಗೆ’, ‘ಕಚ್ಚೂರ ಮಾಲ್ದಿ’, ‘ಪಟ್ಟದ ಪದ್ಮಲೆ’ ಹಾಗೂ ‘ಮಾನಿಷಾದ’ ಮೊದಲಾದ ತುಳು ಪ್ರಸಂಗಗಳಲ್ಲಿ ಭಾಗವತಿಕೆ ಮೂಲಕ ಹೆಸರು ಮಾಡಿದ್ದರು. ದಿನೇಶ ಅಮ್ಮಣ್ಣಾಯ ಅವರು ಯಕ್ಷಗಾನದ ಪ್ರಿಷ್ಠಿತ ಪ್ರಶಸ್ತಿಯಾದ ಉಡುಪಿ ತುಳುಕೂಟದ ‘ಸಾಮಗ ಪ್ರಶಸ್ತಿ’ ಗೆ ಭಾಜನರಾಗಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ