ಪಹಲ್ಗಾಮ್ ದಾಳಿ ಪ್ರಕರಣದ ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ ಹಾಶಿಮ್ ಮೂಸಾನನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಶ್ರೀನಗರ: ಭದ್ರತಾ ಪಡೆಗಳಿಗೆ ಮಹತ್ವದ ಯಶಸ್ಸು ದೊರೆತಿದ್ದು, ಜಮ್ಮು-ಕಾಶ್ಮೀರದ ಮೋಸ್ಟ್‌ ವಾಂಟೆಡ್‌ ಪಾಕಿಸ್ತಾನಿ ಉಗ್ರರಲ್ಲಿ ಒಬ್ಬನಾಗಿದ್ದ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಕಮಾಂಡರ್ ಅಸಿಫ್ ಮೂಸಾ ಅಲಿಯಾಸ್ ಅಸಿಫ್ ಫೌಜಿ ಹತನಾಗಿದ್ದಾನೆ.
ಮಧ್ಯ ಕಾಶ್ಮೀರದ ಬುದ್ಗಾಂ ಜಿಲ್ಲೆಯ ಯೂಸ್ಮಾರ್ಗ್ ಪ್ರವಾಸಿ ತಾಣದ ಸಮೀಪದ ಹೊಸ್ಮೆರ್ ದಟ್ಟ ಅರಣ್ಯ ಪ್ರದೇಶದಲ್ಲಿ ನಡೆದ ರಾತ್ರಿಯಿಡೀ ಮುಂದುವರಿದ ಉಗ್ರವಿರೋಧಿ ಕಾರ್ಯಾಚರಣೆಯಲ್ಲಿ ಈತ ಹತ್ಯೆಯಾಗಿದ್ದಾನೆ.
ಕೊರಾಗ್ ಸುತ್ತಮುತ್ತಲಿನ ಎತ್ತರದ ಪ್ರದೇಶಗಳಲ್ಲಿ ಭಯೋತ್ಪಾದಕರ ಚಲನವಲನದ ಕುರಿತು ನಿರ್ದಿಷ್ಟ ಗುಪ್ತಚರದ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ಮಂಗಳವಾರ ರಾತ್ರಿ ಜಂಟಿ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು. ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಹಾಗೂ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. ಶೋಧ ಕಾರ್ಯಾಚರಣೆಯ ವೇಳೆ, ಮೊಹಮ್ಮದ್ ಆಸಿಫ್ ಅಲಿಯಾಸ್ ಹಾಶಿಮ್ ಮೂಸಾ ಎಂಬಾತನ ಮೃತದೇಹದೊಂದಿಗೆ ಶಸ್ತ್ರಾಸ್ತ್ರಗಳು ಮತ್ತು ಯುದ್ಧೋಪಕರಣಗಳ ಭಾರಿ ಸಂಗ್ರಹವನ್ನು ಪಡೆಗಳು ವಶಪಡಿಸಿಕೊಂಡಿವೆ ಎಂದು ಸೇನೆ ತಿಳಿಸಿದೆ.

ಮೂಸಾ 2025ರಲ್ಲಿ ನಡೆದ ಪಹಲ್ಗಾಮ್ ಉಗ್ರ ದಾಳಿಯ ಪ್ರಮುಖ ಶಂಕಿತರ ಪೈಕಿ ಈತನೂ ಒಬ್ಬನಾಗಿದ್ದ. ಈ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು. ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನಿ ಪ್ರಜೆಗಳು ಹಾಗೂ ಲಷ್ಕರ್-ಎ-ತೊಯ್ಬಾ (LeT) ಉಗ್ರರಾದ ಆದಿಲ್ ಹುಸೇನ್ ಠೋಕರ್, ಅಲಿ ಭಾಯ್ ಮತ್ತು ಹಾಶಿಂ ಮೂಸಾ ಅವರನ್ನು ಬಂಧಿಸಲು ನೆರವಾಗುವ ಮಾಹಿತಿ ನೀಡುವವರಿಗೆ ಜಮ್ಮು-ಕಾಶ್ಮೀರ ಪೊಲೀಸರು 20 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಭದ್ರತಾ ಸಂಸ್ಥೆಯ ಮೂಲಗಳ ಪ್ರಕಾರ, ಮೂಸಾ ಈ ಹಿಂದೆ ಪಾಕಿಸ್ತಾನದ ‘ಸ್ಪೆಷಲ್ ಸರ್ವಿಸ್ ಗ್ರೂಪ್’ನಲ್ಲಿ ಪ್ಯಾರಾ-ಕಮಾಂಡೋ ಆಗಿ ಸೇವೆ ಸಲ್ಲಿಸಿದ್ದ.

ಪ್ರಮುಖ ಸುದ್ದಿ :-   ಏಷ್ಯನ್‌ ಗೇಮ್ಸ್‌ 2026 : ಬಿಲ್ಲುಗಾರಿಕೆಯಲ್ಲಿ 2, ಮಹಿಳಾ ರಿಲೇ ಓಟದಲ್ಲಿ 1 ಚಿನ್ನದ ಪದಕ ಗೆದ್ದ ಭಾರತ

ಅಧಿಕೃತ ಮೂಲಗಳ ಪ್ರಕಾರ, ಅಸಿಫ್ ಫೌಜಿ ಜಮ್ಮು-ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೋಸ್ಟ್‌ ವಾಂಟೆಡ್‌ ಪಾಕಿಸ್ತಾನಿ ಉಗ್ರರಲ್ಲಿ ಒಬ್ಬನಾಗಿದ್ದು, 2023ರ ಸೆಪ್ಟೆಂಬರ್‌ನಲ್ಲಿ ನಿಯಂತ್ರಣ ರೇಖೆ (LoC) ದಾಟಿ ಭಾರತಕ್ಕೆ ನುಸುಳಿದ್ದ. ಕಳೆದ ಸುಮಾರು ಮೂರು ವರ್ಷಗಳಿಂದ ಕಣಿವೆಯಲ್ಲಿ ಸಕ್ರಿಯನಾಗಿದ್ದ ಆತ, ಲಷ್ಕರ್ ಸಂಘಟನೆಯ ಪ್ರಮುಖ ಕಮಾಂಡರ್ ಆಗಿ ಹೊರಹೊಮ್ಮಿದ್ದು, ಕಾಶ್ಮೀರದ ವಿವಿಧ ಭಾಗಗಳಲ್ಲಿ ಉಗ್ರ ಚಟುವಟಿಕೆಗಳನ್ನು ಮುಂದುವರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, 2024ರಿಂದ 2026ರ ಅವಧಿಯಲ್ಲಿ ಅಸಿಫ್ ಬಲಿಷ್ಠ ಕಾರ್ಯಾಚರಣಾ ಜಾಲವನ್ನು ನಿರ್ಮಿಸಿಕೊಂಡಿದ್ದ. ಪೀರ್ ಪಂಜಾಲ್ ಪರ್ವತಶ್ರೇಣಿಯ ಎರಡೂ ಬದಿಗಳಲ್ಲಿ ವ್ಯಾಪಕವಾಗಿ ಸಂಚರಿಸುತ್ತಿದ್ದ ಆತ, ಆರಂಭದಲ್ಲಿ ಪೂಂಚ್ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶಗಳನ್ನು ತನ್ನ ನೆಲೆವನ್ನಾಗಿ ಮಾಡಿಕೊಂಡಿದ್ದ. ಬಳಿಕ ತನ್ನ ಚಟುವಟಿಕೆಗಳನ್ನು ಮಧ್ಯ ಕಾಶ್ಮೀರದತ್ತ, ವಿಶೇಷವಾಗಿ ಬುದ್ಗಾಂ ಮತ್ತು ಯೂಸ್ಮಾರ್ಗ್ ಪ್ರದೇಶಗಳಿಗೆ ಸ್ಥಳಾಂತರಿಸಿದ್ದ.
ಭದ್ರತಾ ಪಡೆಗಳ ಮೇಲೆ ನಡೆದ ಹಲವು ದಾಳಿಗಳಲ್ಲಿ ಈತ ಭಾಗಿಯಾಗಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಸಿಫ್ ವಿರುದ್ಧ ಭದ್ರತಾ ಸಂಸ್ಥೆಗಳು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಆತನ ಚಲನವಲನಗಳನ್ನು ದೀರ್ಘಕಾಲದಿಂದ ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿತ್ತು.

ಇದಕ್ಕೂ ಮುನ್ನ ಅಸಿಫ್‌ಗೆ ದೊಡ್ಡ ಹಿನ್ನಡೆಯಾಗಿತ್ತು. ಆತನ ಆಪ್ತ ಸಹಚರ ಯಾಸಿರ್ ಅಲಿಯಾಸ್ ಅಬು ತಲ್ಹಾ ಸೆಪ್ಟೆಂಬರ್ 5ರಂದು ಬುದ್ಗಾಂ ಅರಣ್ಯ ಪ್ರದೇಶದಲ್ಲಿ ನಡೆದ ‘ಆಪರೇಷನ್ ಅಶ್ದಾರ್’ ವೇಳೆ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ಶ್ರೀನಗರ ಮೂಲದ ಸೇನೆಯ 15ನೇ ಕಾರ್ಪ್ಸ್‌ (ಚಿನಾರ್ ಕಾರ್ಪ್ಸ್‌) ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪ್ರಕಟಿಸಿದ ಮಾಹಿತಿಯಲ್ಲಿ, ಉಗ್ರರ ಉಪಸ್ಥಿತಿಯ ಬಗ್ಗೆ ಲಭಿಸಿದ ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ಆರಂಭಿಸಲಾಗಿತ್ತು ಎಂದು ತಿಳಿಸಿದೆ.
“ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಯೂಸ್ಮಾರ್ಗ್‌ನ ಕೋರಾಗ್ ಪ್ರದೇಶದಲ್ಲಿ ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ ಹಾಗೂ ಸಿಆರ್‌ಪಿಎಫ್‌ ಜಂಟಿಯಾಗಿ ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಕಾರ್ಯಾಚರಣೆ ವೇಳೆ ಎಚ್ಚರಿಕೆಯಿಂದಿದ್ದ ಯೋಧರು ಅನುಮಾನಾಸ್ಪದ ಚಲನವಲನವನ್ನು ಗಮನಿಸಿದರು. ಅವರನ್ನು ಪ್ರಶ್ನಿಸಿದಾಗ ಉಗ್ರರು ಗುಂಡಿನ ದಾಳಿ ನಡೆಸಿದರು. ಇದರಿಂದ ತೀವ್ರ ಗುಂಡಿನ ಚಕಮಕಿ ನಡೆದಿದ್ದು, ಒಬ್ಬ ಉಗ್ರನನ್ನು ಹೊಡೆದುರುಳಿಸಲಾಗಿದೆ. ಕಾರ್ಯಾಚರಣೆ ಇನ್ನೂ ಮುಂದುವರಿದಿದೆ” ಎಂದು ಚಿನಾರ್ ಕಾರ್ಪ್ಸ್ ತಿಳಿಸಿದೆ.
ಅಸಿಫ್ ಫೌಜಿಯ ಹತ್ಯೆಯು ಕಾಶ್ಮೀರದಲ್ಲಿನ ಲಷ್ಕರ್-ಎ-ತೊಯ್ಬಾದ ಕಾರ್ಯಾಚರಣಾ ಜಾಲಕ್ಕೆ, ವಿಶೇಷವಾಗಿ ಮಧ್ಯ ಕಣಿವೆಯಲ್ಲಿನ ಅದರ ಚಟುವಟಿಕೆಗಳಿಗೆ, ಗಮನಾರ್ಹ ಹೊಡೆತ ನೀಡುವ ಸಾಧ್ಯತೆ ಇದೆ ಎಂದು ಭದ್ರತಾ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ.

ಪ್ರಮುಖ ಸುದ್ದಿ :-   ಮೊಬೈಲ್‌, ಚಿನ್ನದ ಸರ ಖರೀದಿಸಲು 1 ತಿಂಗಳ ಮಗುವನ್ನೇ ಮಾರಿದ ದಂಪತಿ; ಪೊಲೀಸರು ಪತ್ತೆ ಮಾಡುವ ಮೊದಲು ನಾಲ್ವರಿಗೆ ಮಾರಾಟ !

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement