ನವದೆಹಲಿ : ರಾಷ್ಟ್ರಪತಿ ಭವನದಲ್ಲಿ ನಡೆದ ಗಂಭೀರ ಸಮಾರಂಭದಲ್ಲಿ, ಕ್ಯಾಪ್ಟನ್ ಅಂಶುಮಾನ ಸಿಂಗ್ ಅವರ ತಾಯಿ ಹಾಗೂ ವಿಧವೆ ಪತ್ನಿ ಸ್ಮೃತಿ ಸಿಂಗ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಭಾರತದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಕೀರ್ತಿ ಚಕ್ರವನ್ನು ಸ್ವೀಕರಿಸಿದರು. ಸಿಯಾಚಿನ್‌ನಲ್ಲಿ ನಡೆದ ಬೆಂಕಿ ಅವಘಡದ ಸಂದರ್ಭದಲ್ಲಿ ತೋರಿದ ಅಸಾಧಾರಣ ಶೌರ್ಯಕ್ಕಾಗಿ ಕ್ಯಾಪ್ಟನ್ ಅಂಶುಮಾನ ಸಿಂಗ್ ಅವರಿಗೆ ಮರಣೋತ್ತರವಾಗಿ ಕೀರ್ತಿ ಚಕ್ರವನ್ನು ನೀಡಲಾಯಿತು. ಕೇವಲ 26ನೇ ವಯಸ್ಸಿನಲ್ಲಿ ಅಂಶುಮಾನ್ ಸಿಂಗ್ ಹುತಾತ್ಮರಾಗಿದ್ದಾರೆ.
ತನ್ನ ದಿವಂಗತ ಪತಿಯ ಧೈರ್ಯ ಮತ್ತು ಸಮರ್ಪಣೆ ಮನೋಭಾವದ ಬಗ್ಗೆ ನೆನಪುಗಳನ್ನು ಹಂಚಿಕೊಂಡ ಎಳೆಯ ವಯಸ್ಸಿನ ಪತ್ನಿ ಸ್ಮೃತಿ ಸಿಂಗ್, ‘ನಾನು ಸಾಮಾನ್ಯ ಸಾವನ್ನು ಸಾಯುವುದಿಲ್ಲ. ನನ್ನ ಎದೆಯ ಮೇಲೆ ಹಿತ್ತಾಳೆ ಪದಕದೊಂದಿಗೆ ಸಾಯುತ್ತೇನೆ ಎಂದು ಅವರು ನನಗೆ ಹೇಳುತ್ತಿದ್ದರು ಎಂದು ಕ್ಯಾಪ್ಟನ್ ಅಂಶುಮಾನ ಸಿಂಗ್ ಅವರ ಮಾತುಗಳನ್ನು ನೆನಪಿಸಿಕೊಂಡರು.
ಕಾಲೇಜಿನ ಮೊದಲ ದಿನದಲ್ಲಿ ಪ್ರಾರಂಭವಾದ ತಮ್ಮಿಬ್ಬರ ಪ್ರೀತಿಯ ಬೆಸುಗೆ ಬಗ್ಗೆಯೂ ಸ್ಮೃತಿ ಸಿಂಗ್ ಮಾತನಾಡಿದ್ದಾರೆ. “ಅದು ಮೊದಲ ನೋಟದಲ್ಲೇ ಬೆಳೆದ ಪ್ರೀತಿಯಾಗಿತ್ತು (it was love at first sight). ಒಂದು ತಿಂಗಳ ನಂತರ ಅಂಶುಮಾನ ಸಿಂಗ್ ಅವರು ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿಗೆ (AFMC) ಆಯ್ಕೆಯಾದರು. ನಾವಿಬ್ಬರೂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಭೇಟಿಯಾದೆವು, ಆದರೆ ನಂತರ ಅವರು ವೈದ್ಯಕೀಯ ಕಾಲೇಜಿಗೆ ಆಯ್ಕೆಯಾದರು. ಕೇವಲ ಒಂದು ತಿಂಗಳ ಭೇಟಿಯ ನಂತರ, ಅಂದಿನಿಂದ ಎಂಟು ವರ್ಷಗಳ ಕಾಲ ನಾವಿಬ್ಬರೂ ದೂರದ ಊರುಗಳಲ್ಲಿದ್ದುಕೊಂಡೇ ಪ್ರೀತಿಸಿದೆವು ಎಂದು ಅವರು ನೆನಪಿಸಿಕೊಂಡರು. “ನಂತರ ನಾವು ಮದುವೆಯಾಗಲು ನಿರ್ಧರಿಸಿದೆವು. ದುರದೃಷ್ಟವಶಾತ್, ನಮ್ಮ ಮದುವೆಯಾದ ಎರಡು ತಿಂಗಳಲ್ಲಿ, ಅವರು ಸಿಯಾಚಿನ್ ಗೆ ಹೋಗಬೇಕಾಯಿತು ಎಂದು ಹೇಳಿದರು.
ಕ್ಯಾಪ್ಟನ್ ಅಂಶುಮಾನ್ ಸಿಂಗ್ ಸಿಯಾಚಿನ್ ಗ್ಲೇಸಿಯರ್ ಪ್ರದೇಶದಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಕರ್ತವ್ಯದಲ್ಲಿದ್ದರು. ಜುಲೈ 19, 2023 ರಂದು ಬೆಳಿಗ್ಗೆ 3 ಗಂಟೆಯ ಸುಮಾರಿಗೆ ಭಾರತೀಯ ಸೇನೆಯ ಮದ್ದುಗುಂಡುಗಳ ಡಂಪ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿತು. ಫೈಬರ್ ಗ್ಲಾಸ್ ಗುಡಿಸಲಿನಲ್ಲಿ ಬೆಂಕಿ ಉರಿಯುತ್ತಿರುವುದನ್ನು ಕಂಡ ಕ್ಯಾಪ್ಟನ್ ಸಿಂಗ್ ಒಳಗೆ ಸಿಕ್ಕಿಬಿದ್ದ ಸೈನ್ಯದ ಸಹೋದ್ಯೋಗಿಗಳನ್ನು ರಕ್ಷಿಸಲು ಮುಂದಾದರು. ಅಲ್ಲಿಯೇ ಹತ್ತಿರವಿದ್ದ ವೈದ್ಯಕೀಯ ತನಿಖಾ ಕೊಠಡಿಗೆ ಬೆಂಕಿ ಹರಡುವ ಮೊದಲು ಅವರು ನಾಲ್ಕರಿಂದ ಐದು ಜನರನ್ನು ಉಳಿಸುವಲ್ಲಿ ಯಶಸ್ವಿಯಾದರು. ಧೈರ್ಯಗೆಡದೆ, ಹೆಚ್ಚಿನ ಜೀವಗಳನ್ನು ಉಳಿಸುವ ಪ್ರಯತ್ನದಲ್ಲಿ ಕ್ಯಾಪ್ಟನ್ ಸಿಂಗ್ ಪುನಃ ಫೈಬರ್ ಗ್ಲಾಸ್ ಮನೆಯನ್ನು ಪ್ರವೇಶಿಸಿದರು. ದುರಂತವೆಂದರೆ, ಉಳಿದವರನ್ನು ಪಾರು ಮಾಡಿ ಅವರು ಸಿಕ್ಕಿಬಿದ್ದರು ಮತ್ತು ಸುಟ್ಟಗಾಯಗಳಿಂದಾಗಿ ಮೃತಪಟ್ಟರು.
8 ವರ್ಷಗಳ ಕಾಲ ಪ್ರೀತಿ ಮಾಡಿದರೂ ನಾವು ಒಟ್ಟಿಗೇ ಇದ್ದಿದ್ದು 2 ತಿಂಗಳು ಮಾತ್ರ ಎಂದು ಸ್ಮೃತಿ ಸಿಂಗ್ ನೆನಪಿಸಿಕೊಂಡರು. “ಜುಲೈ 18 ರಂದು, ಮುಂದಿನ 50 ವರ್ಷಗಳಲ್ಲಿ ನಮ್ಮ ಜೀವನ ಹೇಗೆ ಇರುತ್ತದೆ ಎಂಬುದರ ಕುರಿತು ನಾವು ಸುದೀರ್ಘ ಸಂಭಾಷಣೆ ನಡೆಸಿದ್ದೆವು. ಆದರೆ ಜುಲೈ 19 ರಂದು ಬೆಳಿಗ್ಗೆ, ಅವರು ಇನ್ನಿಲ್ಲ ಎಂದು ನನಗೆ ಕರೆ ಬಂದಿತು. ಮುಂದಿನ 7-8 ತಾಸಿನ ವರೆಗೆ ಅಂತಹದ್ದೇನಾದರೂ ಸಂಭವಿಸಿದೆ ಎಂದು ಒಪ್ಪಿಕೊಳ್ಳಲು ನಾವು ಸಿದ್ಧರಿರಲಿಲ್ಲ ಎಂದು ಅವರು ಹೇಳಿದರು.
“ಈಗ ನನ್ನ ಕೈಯಲ್ಲಿ ಕೀರ್ತಿ ಚಕ್ರವಿದೆ, ಬಹುಶಃ ಇದು ನಿಜ. ಆದರೆ ಪರವಾಗಿಲ್ಲ, ಅವರು ಹೀರೋ. ನಮ್ಮ ಜೀವನವನ್ನು ನಾವು ಸ್ವಲ್ಪ ನಿರ್ವಹಿಸಬಹುದು. ಇತರ ಕುಟುಂಬಗಳನ್ನು ಉಳಿಸಲು ಅವರು ತಮ್ಮ ಜೀವನ ಹಾಗೂ ಸೈನಿಕ ಕುಟುಂಬವನ್ನೇ ನೀಡಿದ್ದಾರೆ ಎಂದು ಅವರು ನೆನಪಿಸಿಕೊಂಡರು.
ಜುಲೈ 22, 2023 ರಂದು ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ಭಾಗಲ್ಪುರದಲ್ಲಿ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರನ್ನು ಪೂರ್ಣ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ