ನವದೆಹಲಿ : ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ ವರ್ಮಾ ಅವರನ್ನು ಮರಳಿ ಅವರ ಮಾತೃ ಸಂಸ್ಥೆಯಾದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ಕೊಲಿಜಿಯಂ ನಿರ್ಧರಿಸಿದೆ.
ನ್ಯಾಯಮೂರ್ತಿ ವರ್ಮಾ ಅವರ ಮನೆಯಲ್ಲಿ ಅಗ್ನಿಶಾಮಕ ದಳ ಬೆಂಕಿ ನಂದಿಸುವಾಗ ಸುಟ್ಟ ನೋಟಿನ ಕಂತೆಗಳು ಪತ್ತೆಯಾದ ನಂತರ ಸುಪ್ರೀಂ ಕೋರ್ಟ್ ಕೊಲಿಜಿಯಂ ಈ ನಿರ್ಧಾರ ಕೈಗೊಂಡಿದೆ. ಮಾರ್ಚ್ 20 ಮತ್ತು ಮಾರ್ಚ್ 24ರಂದು ನಡೆದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನ್ಯಾಯಮೂರ್ತಿ ಯಶವಂತ ವರ್ಮಾ ಅವರ ನಿವಾಸದ ಔಟ್‌ಹೌಸ್‌ನಲ್ಲಿ ಮಾರ್ಚ್ 14ರಂದು ಸಂಭವಿಸಿದ್ದ ಅಗ್ನಿ ಆಕಸ್ಮಿಕದ ವೇಳೆ ಬೆಂಕಿ ನಂದಿಸುವಾಗ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕಂತೆ ಕಂತೆ ನಗದು ಪತ್ತೆಯಾಗಿತ್ತು. ಅರೆಬೆಂದ ನೋಟಿನ ಕಂತೆಗಳ ವೀಡಿಯೊವನ್ನು ದೆಹಲಿ ಪೊಲೀಸ್ ಆಯುಕ್ತರು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೊತೆ ಹಂಚಿಕೊಂಡಿದ್ದರು.
ಈ ಸಂದರ್ಭದಲ್ಲಿ ನ್ಯಾ. ವರ್ಮಾ ಅವರು ಮನೆಯಲ್ಲಿರಲಿಲ್ಲ. ದಂಪತಿ ಮಧ್ಯಪ್ರದೇಶ ಪ್ರವಾಸದಲ್ಲಿದ್ದರು. ಬೆಂಕಿ ಹೊತ್ತಿಕೊಂಡಿದ್ದ ಸಂದರ್ಭದಲ್ಲಿ ಮನೆಯಲ್ಲಿ ನ್ಯಾ. ವರ್ಮಾ ಅವರ ಪುತ್ರಿ ಮತ್ತು ವರ್ಮಾ ಅವರ ತಾಯಿ ಇದ್ದರು.
ಮಾರ್ಚ್ 21ರಂದು ಸಿಜೆಐ ಸಂಜೀವ್ ಖನ್ನಾ ಅವರು ತನಿಖೆಗಾಗಿ ಮೂವರು ಸದಸ್ಯರ ಆಂತರಿಕ ಸಮಿತಿ ರಚಿಸಿದ್ದರು. ಅಲ್ಲದೆ, ನ್ಯಾ. ವರ್ಮಾ ಹೇಳಿಕೆಯನ್ನು ಒಳಗೊಂಡು ದೆಹಲಿ ಮುಖ್ಯ ನ್ಯಾಯಮೂರ್ತಿ ನೀಡಿದ ವರದಿಯನ್ನು ಸುಪ್ರೀಂ ಕೋರ್ಟ್ ಪ್ರಕಟಿಸಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ