ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಮುಡಾ 14 ನಿವೇಶನ ಹಂಚಿಕೆ ಮಾಡಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಭಿಯೋಜನಾ ಮಂಜೂರಾತಿ ನೀಡಿರುವುದನ್ನು ರದ್ದುಪಡಿಸಲು ಕೋರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್ ಗುರುವಾರ ಆದೇಶ ಕಾಯ್ದಿರಿಸಿದೆ. ಅರ್ಜಿ ವಿಲೇವಾರಿಯಾಗುವವರೆಗೆ ಮಧ್ಯಂತರ ಆದೇಶ ಚಾಲ್ತಿಯಲ್ಲಿರಲಿದೆ ಎಂದು ಅದು ತಿಳಿಸಿದೆ.
ರಾಜ್ಯಪಾಲರ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಪ್ರತ್ಯುತ್ತರ ಮಂಡಿಸಿದ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ, “ರಾಜ್ಯ ಸಚಿವ ಸಂಪುಟವು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೀಡಿದ್ದ ಶೋಕಾಸ್ ನೋಟಿಸ್ ಹಿಂಪಡೆಯುವ ಶಿಫಾರಸ್ಸಿನಲ್ಲಿ ಉಲ್ಲೇಖಿಸಿರುವ ಅಂಶಗಳಲ್ಲಿ ಎದ್ದು ಕಾಣುವ ಅತಾರ್ಕಿಕ ಅಂಶಗಳನ್ನು ರಾಜ್ಯಪಾಲರ ಅಭಿಯೋಜನಾ ಮಂಜೂರಾತಿ ಆದೇಶದಲ್ಲಿ ಪಟ್ಟಿ ಮಾಡಿಲ್ಲ. ಬದಲಾಗಿ, ಸಂಪುಟದ ಶಿಫಾರಸ್ಸು ಪಕ್ಷಪಾತಿ ಎಂಬುದನ್ನಷ್ಟೇ ಹೇಳಿದ್ದಾರೆ. ಅವರು ಸ್ವತಂತ್ರವಾಗಿ ವಿವೇಚನೆ ಬಳಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 17ಎ ಅಡಿ ತನಿಖೆಗೆ ಅನುಮತಿಸುವಾಗ ತನಿಖಾಧಿಕಾರಿ ಅಭಿಪ್ರಾಯ ರೂಪಿಸಿರಬೇಕು. ಇದೂ ಹಾಲಿ ಪ್ರಕರಣದಲ್ಲಿ ಅನುಪಾಲನೆಯಾಗಿಲ್ಲ. ಹೀಗಾಗಿ, ರಾಜ್ಯಪಾಲರ ಆದೇಶವನ್ನು ವಜಾ ಮಾಡಬೇಕು” ಎಂದು ಕೋರಿದರು.
“ರಾಜ್ಯಪಾಲರು ತಮ್ಮ ಆದೇಶದಲ್ಲಿ ಆಧರಿಸಿರುವ ಮಧ್ಯಪ್ರದೇಶ ಪೊಲೀಸ್ ಸ್ಥಾಪನಾ ತೀರ್ಪಿನ ಪ್ರಕರಣವು ಸಂಪೂರ್ಣವಾಗಿ ಸಿದ್ದರಾಮಯ್ಯ ಪರವಾಗಿದೆ. ಆದರೆ, ಅದನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದಾರೆ. ದೂರುದಾರರ ಅಬ್ರಹಾಂ ಅವರು ಪ್ರಾಮಾಣಿಕರಲ್ಲ ಅವರಿಗೆ 25 ಲಕ್ಷ ದಂಡ ವಿಧಿಸಲಾಗಿದ್ದು, ಹಲವು ಕ್ರಿಮಿನಲ್ ಪ್ರಕರಣ ದಾಖಲಾಗಿವೆ” ಎಂದು ವಾದಿಸಿದರು.
ಈ ಮಧ್ಯೆ ಪೀಠವು “ಯಾವ ಸಂಪುಟ ತನ್ನ ನಾಯಕನ (ಸಿದ್ದರಾಮಯ್ಯ) ವಿರುದ್ಧ ಅಭಿಯೋಜನಾ ಮಂಜೂರಾತಿ ನೀಡಿರುವುದು ಸರಿ ಎಂದು ಹೇಳುತ್ತದೆ?” ಎಂದು ಪ್ರಶ್ನಿಸಿದರು. ಇದಕ್ಕೆ ಸಿಂಘ್ವಿ ಅವರು “ರಾಜಕೀಯದಲ್ಲಿ ಸಾಕಷ್ಟು ಬಾರಿ ಸಂಪುಟ ತಮ್ಮ ಮುಖ್ಯಮಂತ್ರಿ ವಿರುದ್ಧ ನಡೆದಿದೆ” ಎಂದು ಸಮಜಾಯಿಷಿ ನೀಡಿದರು.
ಸುದೀರ್ಘ ಸುಮಾರು ನಾಲ್ಕು ತಾಸು ವಾದಿಸಿದ ಸಿಂಘ್ವಿ, ಸಚಿವ ಸಂಪುಟವು ಮುಖ್ಯಮಂತ್ರಿಯವರೊಂದಿಗೆ ಕೈಜೋಡಿಸಿದೆ ಎನ್ನುವ ಊಹಾತ್ಮಕ ಆಧಾರದಲ್ಲಿ ರಾಜ್ಯಪಾಲರು ಸ್ವತಂತ್ರವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಸಂಪುಟವು ಹೇಗೆ ಪಕ್ಷಪಾತಿ ಎಂದು ತೋರಿಸುವಲ್ಲಿ ರಾಜ್ಯಪಾಲರು ವಿಫಲರಾಗಿದ್ದಾರೆ. ಊಹಾತ್ಮಕ ಆಧಾರದಲ್ಲಿ ಮುಂದುವರಿಯುವುದಾದರೆ ಎಲ್ಲ ಪ್ರಕರಣಗಳಲ್ಲೂ ಇದನ್ನೇ ಅನ್ವಯಿಸಬೇಕಾಗುತ್ತದೆ. ವಿವೇಚನೆಯ ಅಂಶವೇ ಇಲ್ಲವಾಗುತ್ತದೆ. ರಾಜ್ಯಪಾಲರ ಆರು ಪುಟದ ಆದೇಶವು ಸಂಪುಟದ ಸಲಹೆಯು ಅತಾರ್ಕಿಕ ಎಂದು ಎಲ್ಲಿಯೂ ನಿರೂಪಿಸುವುದಿಲ್ಲ. ರಾಜ್ಯಪಾಲರು ಎರಡು ಕಾಲಂನಲ್ಲಿ, ಮೂರು ಕಾಲಂನಲ್ಲಿ ವಿವರಣೆಗಳನ್ನು ಕೇಳಿದ್ದಾರೆ ಎನ್ನುವುದು ಅವರು ವಿವೇಚನೆಯನ್ನು ಬಳಸಿದ್ದಾರೆ ಎನ್ನುವುದಕ್ಕೆ ಆಧಾರವಾಗುವುದಿಲ್ಲ ಎಂದು ವಾದಿಸಿದರು.
ನಂತರ ಸಿದ್ದರಾಮಯ್ಯ ಪರವಾಗಿ ವಾದ ಮುಂದುವರಿಸಿದ ಮತ್ತೊಬ್ಬ ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ ಅವರು “ಕೆಸರೆ ಗ್ರಾಮದಲ್ಲಿನ ಆಕ್ಷೇಪಾರ್ಹವಾದ ಸರ್ವೆ ನಂ. 464ರಲ್ಲಿನ 3.16 ಗುಂಟೆ ಭೂಮಿಯನ್ನು ಮುಡಾ ಡಿನೋಟಿಫೈ ಮಾಡಿದ್ದು, ದೇವನೂರು ಲೇಔಟ್ ರೂಪಿಸುವಾಗ ಅದನ್ನು ವಶಕ್ಕೆ ಪಡೆಯಲಾಗಿಲ್ಲ. ಸಿದ್ದರಾಮಯ್ಯನವರ ಬಾವಮೈದುನನಿಗೆ ಅದನ್ನು ಮಾರಾಟ ಮಾಡುವಾಗ ಅದರ ಒಡೆತನ ಮೂಲ ಭೂಮಾಲೀಕರ ಬಳಿಯೇ ಇತ್ತೇ ಹೊರತು ಮುಡಾ ಬಳಿ ಅಲ್ಲ. ಆ ವೇಳೆ ಅದು ಕೃಷಿ ಭೂಮಿಯೇ ಆಗಿತ್ತು. ಆಕ್ಷೇಪಾರ್ಹವಾದ ಭೂಮಿಯನ್ನು ಮುಡಾ ತನ್ನ ವಶಕ್ಕೆ ಪಡೆದಿರಲಿಲ್ಲ” ಎಂದು ಪ್ರತಿಪಾದಿಸಿದರು. ಇದಕ್ಕೆ ಪೂರಕವಾಗಿ ರಾಜ್ಯಪತ್ತದ ಪ್ರಕಟಣೆ ಹಾಗೂ ಮುಡಾದ ಲೇಔಟ್‌ನ ನಕಾಶೆಗಳನ್ನು ದಾಖಲೆಯಾಗಿ ಸಲ್ಲಿಸಿದರು.
ಅಡ್ವೊಕೇಟ್ ಜನರಲ್ ಕೆ ಶಶಿಕಿರಣ ಶೆಟ್ಟಿ, ಮೂರನೇ ಪ್ರತಿವಾದಿ ರಂಗನಾಥ ರೆಡ್ಡಿ, ನಾಲ್ಕನೇ ಪ್ರತಿವಾದಿ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲೆ ಲಕ್ಷ್ಮೀ ಐಯ್ಯಂಗಾರ್ ನ್ಯಾಯಾಲಯದ ಸೂಚನೆಯಂತೆ ಚುಟುಕಾಗಿ ಪ್ರತ್ಯುತ್ತರ ಮಂಡಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ