ಕೊಡಗು ಜಿಲ್ಲಾ ಪೊಲೀಸ್ ಖಜಾನೆಯಿಂದಲೇ ಹಣ ನಾಪತ್ತೆ ಪ್ರಕರಣ: ಮೂವರ ಅಮಾನತು

ಮಡಿಕೇರಿ: ಕೊಡಗು ಜಿಲ್ಲಾ ಪೊಲೀಸ್ ಖಜಾನೆಯಲ್ಲಿ ಲಕ್ಷಾಂತರ ರೂ. ಲೂಟಿ ಆಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಅಮಾನತುಗೊಳಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ನಗದು ಶಾಖೆ ನಗದು ನಿರ್ವಾಹಕ ರಂಜಿತ್ ಕುಮಾರ್, ದ್ವಿತೀಯ ದರ್ಜೆ ಗುಮಾಸ್ತ ಲೋಹಿತ್, ಡಿ ಗ್ರೂಪ್ ಸಿಬ್ಬಂದಿ ವಿನೋದ್ ಕುಮಾರ್ ಅಮಾನತುಗೊಂಡವರು ಎಂದು ಆಂದೋಲನ.ಇನ್‌ ವರದಿ ಮಾಡಿದೆ.
ಪೊಲೀಸ್ ಖಜಾನೆಯಿಂದಲೇ ಹಣ ನಾಪತ್ತೆಯಾಗಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ಮಧುಕರ್ ಪಿ. ಪವಾರ್ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರಿಗೆ ಕ್ರಮಕ್ಕೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೂವರನ್ನು ಅಮಾನತುಗೊಳಿಸಲಾಗಿದೆ.
ಜಿಲ್ಲಾ ಪೊಲೀಸ್ ಕಚೇರಿಯ ಲೆಕ್ಕ ವಿಭಾಗದ ಶಾಖಾ ಅಧೀಕ್ಷಕ ಮುರುಗೇಶ್ ಬಾಬುರಾವ್ ಗಡ್ಡಿ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾ ಪೊಲೀಸ್ ಕಚೇರಿ ನಗದು ಶಾಖೆಯಲ್ಲಿ ವಿಷಯ ನಿರ್ವಾಹಕರಾಗಿರುವ ಟಿ.ಎ.ರಂಜಿತ್‌ಕುಮಾರ್ ವಿರುದ್ಧ 8.40 ಲಕ್ಷ ರೂ. ದುರುಪಯೋಗ ಆಗಿದೆ ಎಂದು ಪ್ರಕರಣ ದಾಖಲಿಸಲಾಗಿದೆ.
ಪೊಲೀಸ್ ಧ್ವಜ ಮಾರಾಟದಿಂದ ಸಂಗ್ರಹವಾದ 3.40 ಲಕ್ಷ ರೂ., ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ವಸೂಲಿ ವಾಡಿದ 5 ಲಕ್ಷ ರೂ. ಹಣ ಖಜಾನೆಗೆ ಹಾಗೂ ಸೆಂಟಲ್ ಬಿಎಫ್‌ಗೆ ಮತ್ತು ಕ್ಷೇಮ ನಿಧಿಗೆ ಪಾವತಿ ಮಾಡದೆ ಸರ್ಕಾರಕ್ಕೆ ನಷ್ಟ ಮಾಡಿ, ತನ್ನ ಸ್ವಂತಕ್ಕೆ ದುರುಪಯೋಗಪಡಿಸಿ ಕೊಂಡಿರುವುದು ಕಂಡುಬಂದಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಲೆಕ್ಕ ವಿಭಾಗದ ಶಾಖಾ ಅಧೀಕ್ಷಕ ಮುರುಗೇಶ್ ಬಾಬುರಾವ್ ಗಡ್ಡಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ನಗದು ವಿಭಾಗದಲ್ಲಿ ವಿಷಯ ನಿರ್ವಾಹಕರಾಗಿ ದ್ವಿತೀಯ ದರ್ಜೆ ಸಹಾಯಕ ಟಿ.ಎ ರಂಜಿತ್ ಕುಮಾರ್ 2020ರ ಸೆ.8ರಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಗದು ವಿಭಾಗಕ್ಕೆ ಸಂಬಂಧಿಸಿದ ದಾಖಲಾತಿ ಸರಿಯಾಗಿ ನಿರ್ವಹಿಸದಿರುವುದು ಪರಿಶೀಲನೆ ವೇಳೆ ಪತ್ತೆಯಾಗಿತ್ತು. ಬಾಕಿ ಇರುವ ಹಣ ಜಮಾ ಮಾಡುವಂತೆ ತಿಳಿವಳಿಕೆ ನೀಡಲಾಗಿತ್ತು. ನಾನು ಮೇ 10 ರಿಂದ ರಜೆ ಮೇಲೆ ತೆರಳಿದ್ದು, ಜೂನ್ 5ರಂದು ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ನಗದು ವಿಭಾಗದಲ್ಲಿ ರಂಜಿತ್‌ಕುಮಾರ್ ಕರ್ತವ್ಯ ನಿರ್ವಹಿಸಿದ ಅವಧಿಯವರೆಗಿನ ದಾಖಲಾತಿ ಪರಿಶೀಲಿಸುವಾಗ, ನಗದು ವ್ಯವಹಾರಗಳನ್ನು ದಾಖಲಾತಿಗಳಲ್ಲಿ ಸರಿಯಾಗಿ ನಿರ್ವಹಿಸದಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ: ಸ್ಕೂಟಿಯಲ್ಲಿ ಹೋಗುವಾಗ ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಮಹಿಳೆ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement