ಮುಂಬೈ: ಶೈಕ್ಷಣಿಕ ಒತ್ತಡ ತಾಳಲಾರದೇ ಹಿರಿಯ ಐಎಎಸ್ (IAS) ಅಧಿಕಾರಿಯೊಬ್ಬರ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಮುಂಬೈನಲ್ಲಿ ಸೋಮವಾರ ನಡೆದಿದೆ. ಮೃತ ಯುವತಿಯನ್ನು ಲಿಪಿ ರಸ್ತೋಗಿ (26) ಎಂದು ಗುರುತಿಸಲಾಗಿದೆ. ಇವರು ರಾಜ್ಯ ಸೆಕ್ರೆಟರಿಯಟ್ ಎದುರಿಗಿನ ಕಟ್ಟಡದ 10ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಯಿತಾದರೂ ಆಕೆ ಮಾರ್ಗಮಧ್ಯೆಯೇ ಸಾವಿಗೀಡಾದರು ಎಂದು ವರದಿಯಾಗಿದೆ.
ಲಿಪಿ ರಸ್ತೋಗಿ ಅವರ ತಂದೆ ಐಎಎಸ್ ಅಧಿಕಾರಿ ವಿಕಾಸ್ ಸಿ.ರಸ್ತೋಗಿ ಅವರು ಮಹಾರಾಷ್ಟ್ರದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಯಿ ರಾಧಿಕಾ ವಿ.ರಸ್ತೋಗಿ ಅವರು ಗೃಹ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಲಿಪಿ ಅವರು ಹರಿಯಾಣದ ಸೋನಪತ್ನಲ್ಲಿ ಕಾನೂನು ಪದವಿ ಅಭ್ಯಾಸ ಮಾಡುತ್ತಿದ್ದರು. ಅವರು ಶೈಕ್ಷಣಿಕ ಒತ್ತಡದಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಘಟನಾ ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದ್ದು, ಒತ್ತಡದಿಂದಾಗಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಲು ಸಾಧ್ಯವಾಗಲಿಲ್ಲ ಎಂದು ಲಿಪಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರು ‘ಅಸಹಜ ಸಾವು’ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ