ಮೈಸೂರು: ರಾಜ್ಯವನ್ನು ಕಾಡುತ್ತಿರುವ ಕೊರೊನಾ ಲಾಕ್ಡೌನ್ ನಿಂದಾಗಿ ಕೆಲವರು ಅಗತ್ಯ ವಸ್ತು ಹಾಗೂ ಔಷಧಗಳಿಗೆ ತೀವ್ರ ಪರಿತಪಿಸುವಂತಾಗಿದೆ. ಇಲ್ಲೊಬ್ಬ ತಂದೆ ಕೂಡ ಲಾಕ್ಡೌನ್ನಿಂದಾಗಿ ಮಗನಿಗೆ ಮಾತ್ರೆ ತರಲು ಹರಸಾಹಸ ಪಟ್ಟ ಘಟನೆ ವರದಿಯಾಗಿದೆ.
ಲಾಕ್ಡೌನ್ನಿಂದ ಮಗನಿಗೆ ಔಷಧಿ ತರಲು ತಂದೆ ಬರೋಬ್ಬರು 280 ಕಿ.ಮೀ ಸೈಕಲ್ ತುಳಿದು ಮಾತ್ರೆ ತಂದಿರುವ ಮನಕಲಕುವ ಘಟನೆ ಮೈಸೂರಿನಲ್ಲಿ ನಡೆದಿದೆ ಎಂದು ನ್ಯೂಸ್18 ಕನ್ನಡ ವರದಿ ಮಾಡಿದೆ.
ತಮ್ಮ ವಿಶೇಷ ಚೇತನ ಮಗನ ಔಷಧಕ್ಕೆ ಅವರು ಮೈಸೂರಿನ ಟಿ ನರಸೀಪುರದಿಂದ ಬೆಂಗಳೂರಿಗೆ ಸೈಕಲ್ನಲ್ಲಿಯೇ ಬಂದಿದ್ದಾರೆ. ಸುಮಾರು 280 ಕಿ.ಮೀಗಳ ಅಂತರವನ್ನು ಸೈಕಲ್ನಲ್ಲಿ ಕ್ರಮಿಸಿದ್ದಾರೆ. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಗಾಣಿಗನಕೊಪ್ಪಲು ಗ್ರಾಮದ ಆನಂದ್ ಮನಗ ಸತತ ಮೂರು ದಿನಗಳ ಕಾಲ ಸೈಕಲ್ ತುಳಿದಿದ್ದಾರೆ.
ಗಾರೆ ಕೆಲಸ ನಿರ್ವಹಿಸುತ್ತಿರುವ ಆನಂದ್ ಅವರ ಮಗ ಮಾನಸಿಕ ವಿಶೇಷ ಚೇತನ. ಆತನಿಗೆ ಕಳೆದ 10 ವರ್ಷಗಳಿಂದ ಮಾತ್ರೆಗಳನ್ನು ನೀಡಲಾಗುತ್ತಿದೆ. ಬೆಂಗಳೂರಿನ ನಿಮಾನ್ಸ್ನಲ್ಲಿ ಮಗನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಲಾಕ್ಡೌನ್ ಸಂದರ್ಭದಲ್ಲಿ ಮಗನ ಚಿಕಿತ್ಸೆಗೆ ಬೇಕಾದ ಮಾತ್ರೆಗಳು ಮುಗಿದಿವೆ. ಇದನ್ನು ನೀಡಲೇ ಬೇಕು. ಹೀಗಾಗಿ ಈ ಮಾತ್ರೆ ಸಂಬಂಧ ಸಾಕಷ್ಟು ಹುಡುಕಾಟ ನಡೆಸಿದರೂ ಮಾತ್ರೆಗಳು ಬೇರೆ ಎಲ್ಲೂ ಸಿಗದ ಕಾರಣ ಅವರು ಬೆಂಗಳೂರಿನ ನಿಮಾನ್ಸ್ಗೆ ಬರಬೇಕಾಗಿದೆ. ಒಮ್ಮೆ ಈ ಮಾತ್ರೆಗಳನ್ನು ನೀಡುವುದನ್ನು ತಪ್ಪಿಸಿದರೂ ಇದರಿಂದ ತೊಂದರೆಯಾಗಲಿದೆ. ಹೀಗಾಗಿ ಅವರು ಈ ಸಾಹಸಕ್ಕೆ ಮುಂದಾಗಿದ್ದಾರೆ ಎಂದು ವರದಿ ಹೇಳಿದೆ.
ಮಗನ ಚಿಕಿತ್ಸೆಗೆ ಬೆಂಗಳೂರಿಗೆ ಹೊರಡಲು ಆಟೋ, ವ್ಯಾನ್ ಸೇರಿದಂತೆ ಇತರೆ ವಾಹನಗಳನ್ನು ಬಾಡಿಗೆಗೆ ಕೇಳಿ ನೋಡಿದ್ದಾರೆ. ಆದರೆ, ಯಾವುದೇ, ವಾಹನಗಳು ಬಾಡಿಗೆಗೆ ಸಿಕಿಲ್ಲ. ಅಲ್ಲದೇ, ತಮ್ಮ ಪರಿಚಯಸ್ಥರಲ್ಲಿ ಕೂಡ ಬೈಕ್ ನೀಡುವಂತೆ ಸಹಾಯ ಕೋರಿದರು. ಲಾಕ್ಡೌನ್ ಭೀತಿ ಬೈಕ್ ಸೀಜ್ ಆದರೆ ಎಂದು ಅವರೂ ಹಿಂದೆ ಮುಂದೆ ನೋಡಿದ್ದಾರೆ.
ಕಡೆಗೆ ಏನು ಮಾಡುವುದ ಎಂದು ದಿಕ್ಕ ತೋಚದೆ ಅವರು ಮಗನಿಗಾಗಿ ತಮ್ಮ ಗ್ರಾಮದಿಂದ ಬೆಂಗಳೂರಿಗೆ ಸೈಕಲ್ನಲ್ಲಿಯೇ ಔಷಧಿ ತರುವ ನಿರ್ಧಾರ ಮಾಡಿದ್ದಾರೆ. ಕಳೆದ ಭಾನುವಾರ ಗ್ರಾಮದಿಂದ ತೆರಳಿ ಕನಕಪುರದಲ್ಲಿ ತಂಗಿದ್ದರು. ಅಲ್ಲಿಂದ ನಂತರ ಅಲ್ಲಿಂದ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಹೋಗಿ ಮಾತ್ರೆ ಪಡೆದಿದ್ದಾರೆ. ಆನಂದ್ ನಿತ್ಯ 70 ಕಿಲೋಮೀಟರ್ ಸೈಕಲ್ ತುಳಿದಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ