ಬೆಂಗಳೂರು : ಹನಿಟ್ರ್ಯಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಸುಲಿಗೆ ಮಾಡುತ್ತಿದ್ದ ಮುಂಬೈ ಮೂಲದ ಮಾಡೆಲ್ ಒಬ್ಬಳನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತಳನ್ನು ನೇಹಾ ಅಲಿಯಾಸ್ ಮೆಹರ್ ಎಂದು ಗುರುತಿಸಲಾಗಿದೆ. ಈಕೆಯನ್ನು ಮುಂಬೈನಲ್ಲಿ ಬಂಧಿಸಿರುವ ಪುಟ್ಟೇನಹಳ್ಳಿ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ಶರಣ ಪ್ರಕಾಶ ಬಳಿಗೇರ, ಅಬ್ದುಲ್ ಖಾದರ್, ಯಾಸಿನ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಎರಡು ತಿಂಗಳ ಹಿಂದೆ ಯುವಕನೊಬ್ಬನನ್ನು ಜೆಪಿನಗರದ ವಿನಾಯಕನಗರಕ್ಕೆ ಕರೆಯಿಸಿಕೊಂಡು ಹನಿಟ್ರ್ಯಾಪ್ ಮಾಡಿ ಬೆದರಿಸಿ ಹಣ ಸುಲಿಗೆ ಮಾಡಿದ್ದ ದೂರು ಆಧರಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ.ಆರೋಪಿಗಳು ನಡೆಸುತ್ತಿದ್ದ ಹನಿಟ್ರ್ಯಾಪ್ ದಂಧೆಯಲ್ಲಿ ಹತ್ತಾರು ಜನರು ಲಕ್ಷಾಂತರ ಹಣ ಕಳೆದುಕೊಂಡು ವಂಚನೆಗೊಳಗಾಗಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣ ಟೆಲಿಗ್ರಾಂ ಮೂಲಕ ಯುವಕರನ್ನು ಪರಿಚಯಿಸಿಕೊಂಡು ಹನಿಟ್ರ್ಯಾಪ್ ಜಾಲಕ್ಕೆ ಈ ಗ್ಯಾಂಗ್ ಬೀಳಿಸುತ್ತಿತ್ತು. ವ್ಯಕ್ತಿಯೊಬ್ಬರ ದೂರು ಆಧರಿಸಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ಟೆಲಿಗ್ರಾಂ ಮೂಲಕ ಬಲೆ:
ಸಾಮಾಜಿಕ ಜಾಲತಾಣ ಟೆಲಿಗ್ರಾಂ ಮೂಲಕ ಪರಿಚಯಿಸಿಕೊಂಡು ಅವರ ಬಲಹೀನತೆ ಅರಿತು ಅವರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಲಾಗುತ್ತಿತ್ತು. ಈ ಯುವತಿ ಪುರುಷರೊಂದಿಗೆ ಸಂಪರ್ಕ ಸ್ಥಾಪಿಸಿದ ನಂತರ, ಅವರನ್ನು ಜೆಪಿ ನಗರದ 5 ನೇ ಹಂತದಲ್ಲಿರುವ ಮನೆಗೆ ಬರಲು ಹೇಳುತ್ತಿದ್ದಳು. ಈಕೆಯ ಹಿಂದೆ ಗ್ಯಾಂಗ್ ಸದಸ್ಯರು ಕೆಲಸ ಮಾಡುತ್ತಿದ್ದರು.
ಮನೆ ಡೋರ್ ಬೆಲ್ ಮಾಡುತ್ತಿದ್ದಂತೆ ಬಿಕನಿ ತೊಟ್ಟು ಈಕೆ ಸ್ವಾಗತಿಸುತ್ತಿದ್ದಳು. ಬಳಿಕ ಬಂದ ವ್ಯಕ್ತಿಯನ್ನು ಆಲಂಗಿಸಿಕೊಳ್ಳುತ್ತಿದ್ದಳು. ಬಳಿಕ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇವರಿಬ್ಬರ ಆತ್ಮೀಯ ಕ್ಷಣಗಳು ಸೆರೆಯಾಗುತ್ತಿದ್ದವು. ಇದೇ ವೇಳೆ ತಮ್ಮ ಸಂಚಿನ ಪೂರ್ವ ಯೋಜನೆಯಂತೆ ಮನೆಗೆ ನುಗ್ಗುತ್ತಿದ್ದ ಗ್ಯಾಂಗಿನ ಇತರ ಸದಸ್ಯರು ಸಂತ್ರಸ್ತರ ಮೊಬೈಲ್ ಫೋನ್ ಕಸಿದುಕೊಳ್ಳುತ್ತಿದ್ದರು. ಮೊಬೈಲ್‌ನಲ್ಲಿ ಫೋಟೋ, ವೀಡಿಯೊ ಸೆರೆಹಿಡಲಾಗುತ್ತಿತ್ತು. ನಂತರ ಹಣಕ್ಕಾಗಿ ಬೆದರಿಸಲಾಗುತ್ತಿತ್ತು.
ಕೇಳಿದಷ್ಟು ಹಣ ಕೊಡದಿದ್ದರೆ, ಕಸಿದುಕೊಂಡ ಮೊಬೈಲ್‌ನ ಕಾಂಟಾಕ್ಟ್ ಲಿಸ್ಟ್ ನಲ್ಲಿರುವ ಕುಟುಂಬಸ್ಥರಿಗೆ ಫೋಟೋ ಹಾಗೂ ವೀಡಿಯೊ ಕಳುಹಿಸಿ ಮಾನ ಹರಾಜು ಮಾಡಲಾಗುವುದು ಎಂದು ಬೆದರಿಕೆ ಹಾಕುತ್ತಿದ್ದರು. ಅಲ್ಲದೆ, ಆಕೆಯನ್ನು ಮದುವೆ ಆಗುವಂತೆ ಡ್ರಾಮಾ ಮಾಡುತ್ತಿದ್ದರು. ಮದುವೆ ಆಗಬೇಕಾದರೆ ಕತ್ನಾ ಮಾಡಿಸಬೇಕು, ಮತಾಂತರವಾಗಬೇಕು ಎಂದು ಬೆದರಿಕೆ ಹಾಕುತ್ತಿದ್ದರು, ಇದರಿಂದ ಹೆದರಿ ಹಣ ವರ್ಗಾವಣೆ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಖಾತೆಗೆ ಹಣ ಜಮಾ ಆಗುತ್ತಿದ್ದಂತೆ ಗ್ಯಾಂಗ್ ಪರಾರಿಯಾಗುತ್ತಿತ್ತು. ಸಂತ್ರಸ್ತರಲ್ಲಿ ಒಬ್ಬರು ಈ ಕುರಿತು ಪೊಲೀಸ್ ದೂರು ನೀಡಿದ ನಂತರ ಪೊಲೀಸರು ಕಾರ್ಯಪ್ರವೃತ್ತರಾದರು. ವಿಚಾರಣೆ ವೇಳೆ ಆರೋಪಿಗಳು ಬಲೆಗೆ ಬಿದ್ದ ಹತ್ತಾರು ಮಂದಿಯಿಂದ ಹಣ ಪಡೆಯಲು ಇದೇ ವಿಧಾನವನ್ನು ಬಳಸಿರುವುದು ಪತ್ತೆಯಾಗಿದೆ. ಬಂಧನದ ನಂತರ ಪೊಲೀಸರು ಅವರ ಬ್ಯಾಂಕ್ ಖಾತೆಗಳಿಂದ 30 ಲಕ್ಷ ರೂ.ಗಳಿಗೂ ಹೆಚ್ಚು ಹಣವನ್ನು ಲಪಟಾಯಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ