ಬೆಂಗಳೂರು: ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಖರೀದಿ (bag purchase) ಆರೋಪಿತ ಹಗರಣದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸಂಕಷ್ಟ ಎದುರಾಗಿದೆ. ಈ ಪ್ರಕರಣದಲ್ಲಿ ತನಿಖೆ ಕೋರಿ ಮೈಸೂರಿನ ವಕೀಲ ಎನ್.ಆರ್.ರವಿಚಂದ್ರೇಗೌಡ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠವು, ಮೈಸೂರು ಜಿಲ್ಲೆಯ ಅಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಅಡಿ ಪೂರ್ವಾನುಮತಿ ನೀಡಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಒಂದು ತಿಂಗಳ ಗಡುವು ವಿಧಿಸಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಪರಿಸರ ಸ್ನೇಹಿ, ಬಟ್ಟೆಯ ಕೈಚೀಲಗಳನ್ನು ಮಾರುಕಟ್ಟೆ ದರ ₹13ಕ್ಕೆ ಬದಲಾಗಿ ₹52ಕ್ಕೆ ಖರೀದಿಸುವ ಮೂಲಕ ಭ್ರಷ್ಟಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ರೋಹಿಣಿ ಸಿಂಧೂರಿ ವಿರುದ್ಧ ತನಿಖೆ ಕೈಗೊಳ್ಳಬೇಕೆಂಬ ಮೈಸೂರಿನ ವಕೀಲ ಎನ್ ಆರ್ ರವಿಚಂದ್ರೇಗೌಡ ಅವರ ಪೂರ್ವಾನುಮತಿ ಕೋರಿಕೆ ನಿರಾಕರಿಸಿದ್ದ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್) ಆದೇಶವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ ಎಂದು ವರದಿ ತಿಳಿಸಿದೆ.
“ಆರೋಪದ ತನಿಖೆಗೆ ಪೂರ್ವಾನುಮತಿ ನೀಡಲು ನಿರಾಕರಿಸಿರುವ ನಿರ್ಧಾರ ವಸ್ತುನಿಷ್ಠ ಮತ್ತು ತಾರ್ಕಿಕ ಅಂಶಗಳಿಂದ ಕೂಡಿಲ್ಲ. ಇಲಾಖೆಯು, ಆರೋಪಗಳ ಗಂಭೀರತೆಯನ್ನು ಗಮನವಿಟ್ಟು ಪರಿಶೀಲಿಸಿ ನ್ಯಾಯೋಚಿತ ನಿರ್ಧಾರ ಕೈಗೊಳ್ಳಲು ವಿಫಲವಾಗಿರುವುದು ಎದ್ದು ಕಾಣುತ್ತದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. “ ಭ್ರಷ್ಟಾಚಾರ ಒಂದು ಪಿಡುಗು. ಇದನ್ನು ಕ್ಯಾನ್ಸರ್, ಪ್ಲೇಗ್ ಮತ್ತು ಸಾಂಕ್ರಾಮಿಕ ಎಂದು ವಿವಿಧ ರೀತಿಯಲ್ಲಿ ವರ್ಣಿಸಲಾಗಿದೆ” ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಪೀಠವು ಆದೇಶದಲ್ಲಿ ಉಲ್ಲೇಖಿಸಿದೆ.
ಏನಿದು ಪ್ರಕರಣ..?
ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಮೈಸೂರು ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಿಸಬೇಕು ಮತ್ತು ಪ್ಲಾಸ್ಟಿಕ್ ಬಳಕೆಗೆ ಮುಕ್ತಾಯ ಹಾಡಿ ಬಟ್ಟೆಯ ಕೈಚೀಲಗಳನ್ನು ಬಳಸಬೇಕು ಎಂದು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಜಿಲ್ಲೆಯ ನಗರ, ಗ್ರಾಮಾಂತರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶಿಸಿದ್ದರು.
ಈ ನಿಟ್ಟಿನಲ್ಲಿ ಮುಕ್ತ ಮಾರುಕಟ್ಟೆಯಲ್ಲಿ 5ರಿಂದ 10 ಕೆಜಿಯ ಪ್ರತಿ ಚೀಲಕ್ಕೆ ₹13 ಇದ್ದರೆ ಅವುಗಳನ್ನು ಪ್ರತಿ ಚೀಲಕ್ಕೆ ₹52ರಷ್ಟು (ಜಿಎಸ್‌ಟಿ ಸೇರಿ) ದರ ನೀಡಿ ಖರೀದಿಸಲಾಗಿದೆ. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ₹7,65,15,816 ಕೋಟಿ ನಷ್ಟು ಉಂಟು ಮಾಡಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಅಕ್ರಮದ ಕುರಿತಂತೆ, ಭ್ರಷ್ಟಾಚಾರ ನಿಗ್ರಹ ಕಾಯಿದೆ–1988ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು 2021ರ ಅಕ್ಟೋಬರ್ 13ರಂದು ಮೈಸೂರು ಜಿಲ್ಲಾ ಭ್ರಷ್ಟಚಾರ ನಿಗ್ರಹ ದಳಕ್ಕೆ (ಎಸಿಬಿ) ರವಿಚಂದ್ರೇಗೌಡ ದೂರು ನೀಡಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ