ಜಾತಿ ಗಣತಿ ವರದಿ: ತೀರ್ಮಾನಕ್ಕೆ ಬರಲಾಗದೆ ಮುಗಿದ ಸಚಿವ ಸಂಪುಟ ಸಭೆ

ಬೆಂಗಳೂರು : ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ ಜಾತಿ ಗಣತಿ (Caste Census) ವರದಿ ಬಗ್ಗೆ ನಿರ್ಧರಿಸಲು ಕರೆಯಲಾಗಿದ್ದ ಸಚಿವ ಸಂಪುಟ ಸಭೆಯಲ್ಲಿ ಹಲವು ಸಚಿವರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದೆ ಮುಕ್ತಾಯವಾಗಿದೆ.
ಹಲವು ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಯಾವುದೇ ಸ್ಪಷ್ಪ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲʼʼ ಎಂದು ಮೂಲಗಳು ತಿಳಿಸಿವೆ. ಮುಂದಿನ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವರು ಹೇಳಿದ್ದಾರೆ. ಏಪ್ರಿಲ್‌ 11ರಂದು ನಡೆದ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆಯಾಗಿದ್ದು, ಬಳಿಕ ಸಂಪುಟದ ಎಲ್ಲ ಸದಸ್ಯರಿಗೂ ಈ ವರದಿಯ ದತ್ತಾಂಶ, ಪ್ರಮುಖ ಶಿಫಾರಸು ಒಳಗೊಂಡ ಪ್ರತಿಯನ್ನು ನೀಡಲಾಗಿತ್ತು.

ಕಳೆದೊಂದು ವಾರದಿಂದ ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಪ್ರಮುಖವಾಗಿ ನಾನಾ ಸಮುದಾಯಗಳ ಸಂಘ, ಸಂಸ್ಥೆಯವರು, ಜಾತಿ ಗಣತಿಯ ಪರ ಇರುವವರು ಮತ್ತು ವಿರುದ್ಧ ಇರುವವರು ತಮ್ಮ ನಿಲುವನ್ನು ಪ್ರಕಟಿಸಿದ್ದಾರೆ. ವೀರಶೈವ ಲಿಂಗಾಯತರು ಮತ್ತು ಒಕ್ಕಲಿಗರು ಜಾತಿ ಗಣತಿ ವರದಿಗೆ ವಿರೋಧ ವ್ಯಕ್ತಪಡಿಸಿ ಮರು ಸಮೀಕ್ಷೆ ಆಗಲೇಬೇಕು ಎಂಬ ಒತ್ತಾಯ ಬಂದ ಹಿನ್ನೆಲೆಯಲ್ಲಿ ಸೂಕ್ತ ತೀರ್ಮಾನಕ್ಕೆ ಬರಲಾಗಿಲ್ಲ.
ಹಿರಿಯ ಸಚಿವ ರಾಮಲಿಂಗಾ ರೆಡ್ಡಿ ಈ ಬಗ್ಗೆ ಮಾತನಾಡಿ, ಇಂದಿನ ಸಭೆಯಲ್ಲಿ ಯಾವುದೇ ತೀರ್ಮಾನ ಆಗಿಲ್ಲ. ಧನಾತ್ಮಕವಾಗಿಯೇ ಚರ್ಚೆ ನಡೆದಿದೆ. ಅಭಿಪ್ರಾಯಗಳನ್ನು ಲಿಖಿತ ಅಥವಾ ಮೌಖಿಕ ರೂಪದಲ್ಲಿ ಕೊಡುವಂತೆ ಮುಖ್ಯಮಂತ್ರಿ ಸಲಹೆ ನೀಡಿದ್ದಾರೆ. ಮುಂದಿನ ಸಭೆಯಲ್ಲಿ ಸೂಕ್ತ ತೀರ್ಮಾನಕ್ಕೆ ಬರಲಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಸವದತ್ತಿ | ಸಿಡಿಲು ಬಡಿದು ಇಬ್ಬರು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement