ರಾಜ್ಯದಲ್ಲಿ ಜುಲೈ ಎರಡು ವಾರದಲ್ಲಿ ವಾಡಿಕೆಗಿಂತ ಶೇ.106 ರಷ್ಟು ಅಧಿಕ ಮಳೆ

ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡು ವಾರದಲ್ಲಿ ವಾಡಿಕೆಗಿಂತ ಶೇ.106ರಷ್ಟು ಹೆಚ್ಚು ಮಳೆಯಾಗಿದೆ. ಜುಲೈ 1ರಿಂದ ಜುಲೈ 14ರ ನಡುವಿನ ಅವಧಿಯಲ್ಲಿ ರಾಜ್ಯದ ವಾಡಿಕೆ ಮಳೆ ಪ್ರಮಾಣ 118ಮಿ.ಮೀ, ಆದರೆ 243ಮಿ.ಮೀ.ನಷ್ಟು ಮಳೆಯಾಗಿದೆ.
ಜೂನ್ ಮೊದಲ ಮೂರು ವಾರ ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಹಲವು ಭಾಗಗಳಲ್ಲಿ ಮಳೆ ಕೊರತೆಯಾಗಿತ್ತು. ಆದರೆ ಜೂನ್ ಕೊನೆಯಲ್ಲಿ ಚೇತರಿಕೆ ಕಂಡ ಮಳೆ ಆರ್ಭಟ ತಗ್ಗಿಲ್ಲ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಹಲವೆಡೆ ಪ್ರವಾಹ, ಭೂಕುಸಿತ ಉಂಟಾಗಿದೆ.
ಕಳೆದ ಎರಡು ವಾರದಲ್ಲಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಶೇ.85ರಷ್ಟು, ಉತ್ತರ ಒಳನಾಡಿನಲ್ಲಿ ಶೇ.102ರಷ್ಟು ಹಾಗೂ ಕರಾವಳಿ ಮತ್ತು ಮಲೆನಾಡಿನಲ್ಲಿ ಶೇ.109ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

ಕಳೆದ ಜನವರಿಯಿಂದ ಜುಲೈ14ರ ಅವಧಿಯಲ್ಲಿ ಶೇ.46ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಈ ಅವಧಿಯಲ್ಲಿ ವಾಡಿಕೆ ಮಳೆ ಪ್ರಮಾಣ 437ಮಿ.ಮೀ. ಆಗಿದ್ದು, ಆದರೆ 637ಮಿ.ಮೀ.ರಷ್ಟು ಮಳೆಯಾಗಿದೆ. ಕರಾವಳಿಯಲ್ಲಿ ಶೇ.29ರಷ್ಟು, ದಕ್ಷಿಣ ಒಳನಾಡಿನಲ್ಲಿ ಶೇ.92, ಉತ್ತರ ಒಳನಾಡಿನಲ್ಲಿ ಶೇ.45, ಮಲೆನಾಡಿನಲ್ಲಿ ಶೇ.39 ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.
ಜೂನ್‍ನಿಂದ ಈತನಕ ರಾಜ್ಯದಲ್ಲಿ ವಾಡಿಕೆಗಿಂತ ಶೇ.26ರಷ್ಟುಹೆಚ್ಚು ಮಳೆಯಾಗಿದೆ. ಈ ಅವಧಿಯಲ್ಲಿ ವಾಡಿಕೆಯಂತೆ 318ಮಿ.ಮೀ. ಮಳೆಯಾಗಬೇಕಿದ್ದು, ಆದರೆ 399 ಮಿ.ಮೀ.ನಷ್ಟು ಮಳೆಯಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ, ಇನ್ನೂ ಎರಡು ದಿನ ಹೆಚ್ಚು ಕಡಿಮೆ ಇದೇ ರೀತಿ ಮಳೆ ಮುಂದುವರಿಯುವ ಸಾಧ್ಯತೆಗಳಿವೆ.
ಕರಾವಳಿ, ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಹೆಚ್ಚಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದರೂ ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಮಳೆ ಕೊರತೆ ಮುಂದುವರಿದಿದೆ.

ಪ್ರಮುಖ ಸುದ್ದಿ :-   ಜೋಗಿ, ಕಬ್ಬಿನಾಲೆ, ಶಿವಾನಂದ ಹೆಗಡೆಗೆ ಕೆರೆಮನೆ ʼಮಹಾಬಲ ಪ್ರಶಸ್ತಿʼ ಪ್ರಕಟ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement