ಬೆಂಗಳೂರು : ರಾಜ್ಯದಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಲು ಅಗತ್ಯವಾಗಿರುವ ವಯಸ್ಸಿನ ಬಗ್ಗೆ ಮೂಡಿರುವ ಗೊಂದಲಕ್ಕೆ ಸರ್ಕಾರ ಸದ್ಯಕ್ಕೆ ನಿವಾರಿಸಿದೆ.
1ನೇ ತರಗತಿ ಪ್ರವೇಶಕ್ಕೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂಬ ನಿಯಮದಲ್ಲಿ ಈ ವರ್ಷವೂ ಸಡಿಲಿಕೆ ಮಾಡುವುದಾಗಿ ಅಧಿವೇಶನದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಜೂನ್ 1ಕ್ಕೆ ಮಗುವಿಗೆ 6 ವರ್ಷ ತುಂಬಿರಬೇಕು ಎಂಬ ನಿಯಮಕ್ಕೆ ಈ ಬಾರಿ 60 ದಿನಗಳ ಅಂದರೆ 2 ತಿಂಗಳ ರಿಯಾಯಿತಿ ನೀಡಲಾಗುತ್ತಿದೆ. ಇದರಿಂದ ನಿಗದಿತ ದಿನಾಂಕಕ್ಕೆ ಎರಡು ತಿಂಗಳು ಬಾಕಿ ಇರುವ ಮಕ್ಕಳಿಗೂ 1ನೇ ತರಗತಿಗೆ ಪ್ರವೇಶ ಪಡೆಯಲು ಅವಕಾಶ ಸಿಗಲಿದೆ.
ವಿಧಾನಸಭೆಯಲ್ಲಿ ಈ ಕುರಿತು ಮಾತನಾಡಿದ ಸಚಿವರು, “ಕರ್ನಾಟಕ ಶಿಕ್ಷಣ ಕಾಯ್ದೆ 1993ರ ಅನ್ವಯ, ಪೋಷಕರ ಹಿತದೃಷ್ಟಿಯಿಂದ 2026-27ನೇ ಸಾಲಿಗೆ ಈ ವಿನಾಯಿತಿ ಅನ್ವಯವಾಗಲಿದೆ. ಪ್ರಸಕ್ತ ವರ್ಷಕ್ಕೆ ಅನ್ವಯವಾಗುವಂತೆ ಮಕ್ಕಳ ಶಾಲಾ ಪ್ರವೇಶಕ್ಕೆ ನಿಗದಿಪಡಿಸಿದ್ದ 6 ವರ್ಷಗಳ ವಯೋಮಿತಿಗೆ 60 ದಿನಗಳ ಕಾಲ ವಿನಾಯಿತಿ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಶಾಲಾ ದಾಖಲಾತಿಗಾಗಿ ಬಳಸುವ ಸಾಫ್ಟ್ವೇರ್ನಲ್ಲಿ ಈ ಬದಲಾವಣೆಯನ್ನು ತಕ್ಷಣವೇ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ಹಲವು ಮಕ್ಕಳ ವಯಸ್ಸು ಜೂನ್ಗೆ ಕೇವಲ ಕೆಲವು ದಿನಗಳ ಅಂತರದಲ್ಲಿ 6 ವರ್ಷಕ್ಕಿಂತ ಸ್ವಲ್ಪ ಕಡಿಮೆ ಇರುತ್ತದೆ. ಇದರಿಂದ ಮಕ್ಕಳ ಒಂದು ವರ್ಷ ವ್ಯರ್ಥವಾಗುತ್ತದೆ ಎಂಬ ದೂರುಗಳುಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ವಯಸ್ಸಿನ ಮಿರಿಯನ್ನು ಮತ್ತೊಮ್ಮೆ ಸಡಿಲಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ