ಮೊಬೈಲ್ ಆಮ್ಲಜನಕ ಪೂರೈಕೆಗೆ ಗಂಭೀರ ಚಿಂತನೆ: ಬೊಮ್ಮಾಯಿ

ಬೆಂಗಳೂರು : ಜನರ ಪ್ರಾಣ ಉಳಿಸಲು ತುರ್ತು ಸಂದರ್ಭಗಳಲ್ಲಿ ಬೆಂಗಳೂರು ನಗರದಲ್ಲಿ ಮೊಬೈಲ್ ಆಮ್ಲಜನಕ ಸಿಲಿಂಡರ್‌ಗಳ ಪೂರೈಕೆ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಗೃಹ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸೋಮವಾರ ಬೆಂಗಳೂರು ಪೂರ್ವವಲಯದ ಕೋವಿಡ್ ಸ್ಥಿತಿಗತಿ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ನಡೆಸಿದ ಸಭೆಯ ನಂತರ ಸುದ್ದಿಗಾರರಿಗೆ ಅವರು ಈ ವಿಷಯ ತಿಳಿಸಿದರು.
ಕೋಟ್‌
ಖಾಸಗಿ ವೈದ್ಯಕೀಯ ಕಾಲೇಜುಗಳು ತಮ್ಮ ಪಾಲಿನ 1035 ಹಾಸಿಗೆಗಳ ಪೈಕಿ ಈಗಾಗಲೇ 800 ಹಾಸಿಗೆಗಳನ್ನು ಸರ್ಕಾರದ ಸುಪರ್ದಿಗೆ ವಹಿಸಿದ್ದಾರೆ.  ಇನ್ನೆರಡು ದಿನಗಳಲ್ಲಿ ಬಾಕಿ 235 ಬೆಡ್ ಗಳನ್ನು ಸರ್ಕಾರದ ವಶಕ್ಕೆ ನೀಡಲಿವೆ 

-ಬಸವರಾಜ ಬೊಮ್ಮಾಯಿ. ಗೃಹ ಖಾತೆ ಸಚಿವರು

ಚೆನ್ನೈನಲ್ಲಿ ಒಂದು ಖಾಸಗಿ ಸಂಸ್ಥೆ ಮೊಬೈಲ್ ಆಮ್ಲಜನಕ ಪೂರೈಕೆ ಕೆಲಸ ಮಾಡುತ್ತಿದೆ.  ಬಸ್ಸುಗಳಲ್ಲಿ ತುರ್ತು ಸಂದರ್ಭಗಳಲ್ಲಿ ಸೋಂಕಿತರಿಗೆ ಆಮ್ಲಜನಕ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಅದೇ ಮಾದರಿ ಅನುಸರಿಸಲು ಚಿಂತನೆ ನಡೆಸುತ್ತಿದ್ದೇವೆ. ಬಸ್ಸುಗಳಲ್ಲಿ ರೋಗಿಗಳು ಆಮ್ಲಜನಕ ಪಡೆದು ತಮ್ಮ ಜೀವ ರಕ್ಷಣೆ ಮಾಡಿಕೊಳ್ಳಲು ಮೊಬೈಲ್ ಆಮ್ಲಜನಕಗಳ ವ್ಯವಸ್ಥೆ ಮಾಡಬೇಕೆಂಬುದು ನಮ್ಮ ಉದ್ದೇಶ.  ಅಗತ್ಯವೆನಿಸಿದರೆ ಸೋಂಕಿತರ ಮನೆಗಳಿಗೂ ಕಳುಹಿಸುವ ವ್ಯವಸ್ಥೆ ಮಾಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದುತಿಳಿಸಿದರು.
ಬೆಡ್ ಬ್ಲಾಕಿಂಗ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ‌ . ಸಿಸಿಬಿ ಈ ಕುರಿತು ತನಿಖೆ ನಡೆಸುತ್ತಿದೆ. ಅಮಾಯಕರಿಗೆ ಯಾವುದೇ ರೀತಿಯ ತೊಂದರೆ ಕೊಡದಂತೆ ಸೂಚಿಸಿದ್ದೇನೆ.  ತಪ್ಪಿತಸ್ಥರಿಗೆ ಮಾತ್ರ ಶಿಕ್ಷೆ ನೀಡಲಾಗುವುದು. ಯಾರು ದುಡ್ಡಿಗಾಗಿ ಬೆಡ್ ಬ್ಲಾಕ್ ಮಾಡಿದ್ದಾರೋ ಅಂಥವರಿಗೆ ಕಠಿಣ ಶಿಕ್ಷೆ ನೀಡಲಾಗುವುದು. ಇದರಲ್ಲಿ ರಾಜಿ ಇಲ್ಲ. ಆದರೆ ಅಮಾಯಕರಿಗೆ ಈ ಸಂಬಂಧ ವಿನಾಕಾರಣ ತೊಂದರೆ ಕೊಡದಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಬೆಂಗಳೂರಿನಲ್ಲಿ ನಾರಾಯಣ ಹೃದಯಾಲಯ,  ಮಣಿಪಾಲ್ ಆಸ್ಪತ್ರೆ ಮುಂತಾದ ದೊಡ್ಡದೊಡ್ಡ ಆಸ್ಪತ್ರೆ ಪಕ್ಕದಲ್ಲಿರುವ ಹೋಟೆಲುಗಳ ರೂಮುಗಳನ್ನು ಸ್ಟೆಪ್‌ ಡೌನ್‌ ಆಸ್ಪತ್ರೆಗಳನ್ನಾಗಿ ಪರಿವರ್ತನೆ ಮಾಡಲಾಗುತ್ತಿದೆ. ಒಟ್ಟು ಒಟ್ಟು 5000 ಸ್ಟೆಪ್‌ ಡೌನ್‌ ಆಸ್ಪತ್ರೆಗಳ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ. ಅವುಗಳ ಪೈಕಿ ಈಗಾಗಲೇ 945 ಹಾಸ್ಪಿಟಲ್ ಗುರುತಿಸಲಾಗಿದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಗೋಕರ್ಣ : ಸಮುದ್ರದ ಅಲೆಗೆ ಸಿಲುಕಿದ್ದ ಮೂವರು ಪ್ರವಾಸಿಗರ ರಕ್ಷಣೆ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement