ಬಳ್ಳಾರಿ ಕಾಂಗ್ರೆಸ್ ಶಾಸಕ ನಾರಾ ಭರತ ರೆಡ್ಡಿ ಮನೆ, ಕಚೇರಿ ಮೇಲೆ ಇ.ಡಿ ದಾಳಿ

ಬಳ್ಳಾರಿ: ಬಳ್ಳಾರಿ ನಗರ ಕಾಂಗ್ರೆಸ್‌ ಶಾಸಕ ನಾರಾ ಭರತ ರೆಡ್ಡಿ ಮನೆ, ಕಚೇರಿಗಳ ಮೇಲೆ ಶನಿವಾರ ಮುಂಜಾನೆ ಜಾರಿ ನಿರ್ದೇಶನಾಲಯ (ಇ.ಡಿ)ದ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಅಲ್ಲದೆ, ಅವರ ತಂದೆ ಹಾಗೂ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ, ಚಿಕ್ಕಪ್ಪ ಪ್ರತಾಪ ರೆಡ್ಡಿ ಮತ್ತು ಸಂಬಂಧಿಗಳ ಮನೆಗಳು, ಕಚೇರಿಗಳ ಮೇಲೆಯೂ ದಾಳಿ ನಡೆಸಲಾಗಿದೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು, ಶನಿವಾರ ಬೆಳಗ್ಗೆ 6:30ಕ್ಕೆ ಏಕಕಾಲಕ್ಕೆ ಶಾಸಕ ನಾರಾ ಭರತ ರೆಡ್ಡಿ ಮನೆ, ಅವರ ತಂದೆಯ ಕಚೇರಿ, ಅವರ ಚಿಕ್ಕಪ್ಪ ಪ್ರತಾಪ ರೆಡ್ಡಿ ಮನೆ ಮತ್ತು ಕಚೇರಿಯ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾರೆ. ಇಡಿ ಅಧಿಕಾರಿಗಳ ನಾಲ್ಕು ತಂಡಗಳು ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ ಎನ್ನಲಾಗಿದೆ.

ಶಾಸಕ ಭರತ್‌ ರೆಡ್ಡಿ ಅವರ ಕುಟುಂಬ ಗ್ರಾನೈಟ್‌ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಕೊಪ್ಪಳ ಜಿಲ್ಲೆಯ ಕುಕನೂರು, ಆಂಧ್ರ ಪ್ರದೇಶದ ಒಂಗೋಲ್‌ಗಳಲ್ಲಿ ಕ್ವಾರಿಗಳನ್ನು ಹೊಂದಿದೆ. ಹೀಗಾಗಿ ಕುಟುಂಬದ ಬೆಂಗಳೂರು, ಚೆನ್ನೈನಲ್ಲಿರುವ ಕಚೇರಿಗಳ ಮೇಲೂ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಬೆಂಗಳೂರಿನಿಂದ ಆಗಮಿಸಿರುವ ಇ.ಡಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡಿಲ್ಲ ಎನ್ನಲಾಗಿದೆ.
ಕೆಲ ವರ್ಷಗಳ ಹಿಂದೆ ಭರತ್‌ ರೆಡ್ಡಿ ಅವರ ಮನೆ, ಕಚೇರಿ ಮೇಲೆ ಐ.ಟಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣಗೆ ನಾವು ಅನುಮತಿ ನೀಡಿಲ್ಲ ; ರಾಜತಾಂತ್ರಿಕ ಪಾಸ್‌ಪೋರ್ಟ್‌ನಲ್ಲಿ ಜರ್ಮನಿಗೆ ತೆರಳಿದ್ದಾರೆ : ವಿದೇಶಾಂಗ ಸಚಿವಾಲಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement