ಬೆಂಗಳೂರು : ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳ ಜೀವನಾಧಾರಿತ ʼವರದಯೋಗಿʼ ಶ್ರೀಧರ ಎಂಬ ಭಕ್ತಿ ಪ್ರಧಾನ ನಾಟಕವನ್ನು ಗುರುವಾರ (ಡಿಸೆಂಬರ್ 25 ) ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಯಶಸ್ವಿಯಾಗಿ ಪ್ರದರ್ಶಗೊಂಡಿತು.
ಮೂರೂವರೆ ತಾಸುಗಳ ಕಾಲ ನಡೆದ ಈ ಪ್ರದರ್ಶನವು ಶ್ರೀ ಗಜಾನನ ಕಲೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್ ಮಣ್ಣಿಗೆ, ಹೊನ್ನಾವರ (ಉತ್ತರ ಕನ್ನಡ) ಹಾಗೂ ಶ್ರೀ ಶ್ರೀಧರ ಸ್ವಾಮಿಗಳ ಭಕ್ತವೃಂದ ಬೆಂಗಳೂರು ಇವರ ಸಹಯೋಗದಲ್ಲಿ ಪ್ರಸ್ತುತಗೊಗೊಂಡಿತು. ಸುಮಾರು 50 ಹವ್ಯಾಸಿ ಕಲಾವಿದರು ಅಭಿನಯಿಸಿದ ʼವರದಯೋಗಿʼ ಶ್ರೀಧರ ಎಂಬ ನಾಟಕವನ್ನು ಎಂ ಜಿ ವಿಷ್ಣು ಮಣ್ಣಿಗೆ ಅವರು ಬರೆದಿದ್ದು, ಪ್ರಸಿದ್ಧ ಮಣ್ಣಿನ ಮೂರ್ತಿ ತಯರಕರು ಹಾಗೂ ರಂಗ ನಿರ್ದೇಶಕರಾದ ಜಿ. ಡಿ. ಭಟ್ಟ ಕೆಕ್ಕಾರು ನಿರ್ದೇಶನ ಮಾಡಿದ್ದಾರೆ. ಈ ನಾಟಕಕ್ಕೆ ರೂಪಕಕ್ಕೆ ವಿದ್ವಾನ್ ವಿಶ್ವೇಶ್ವರ ಭಟ್ಟರ ಹಿನ್ನೆಲೆ ಗಾಯನ ನೀಡಿದರು. ಇವರಿಗೆ ಪಕ್ಕ ವಾದ್ಯಗಾರರಾದ ಗುರುರಾಜ ಆಡುಕಳ, ಅರುಣ ಮೂರೂರ, ಮನೋಜ ಭಟ್ಟ, ನಿರಂಜನ ಹೆಗಡೆ ಸಾಥ್ ನೀಡಿದ್ದಾರೆ.
ʼವರದಯೋಗಿʼ ಶ್ರೀಧರ ಎಂಬ ನಾಟಕ ವೀಕ್ಷಿಸಲು ವಿವಿಧ ರಂಗದ ಗಣ್ಯರು, ಕಲಾವಿದರು ಆಗಮಿಸಿದ್ದರು. ನಾಟಕ ಪ್ರದರ್ಶನದ ವೇಳೆ ಸಾಕ್ಷಿ ನಿರ್ದೇಶಕರಾದ ಜಿ ಡಿ ಭಟ್ಟ ಕೆಕ್ಕಾರು ಹಾಗೂ ಗಾಯಕ ವಿದ್ವಾನ್ ವಿಶ್ವೇಶ್ವರ ಭಟ್ಟ ಖರ್ವಾ ಅವರನ್ನು ಸನ್ಮಾನಿಸಲಾಯಿತು. ಸಾಹಿತಿಗಳಾದ ಗಜಾನನ ಶರ್ಮಾ, ಉದ್ಯಮಿ ಆನಂದ ವಿ ಭಟ್ಟ, ಕಟ್ಟಡ ನಿರ್ಮಾಣಗಾರರಾದ ಗಣಪತಿ ಹೆಗಡೆ , ಸತೀಶ ಕಾಕಲ್, ಡಾ.ನಾಗೇಂದ್ರ ಹೊನ್ನವಳ್ಳಿ ಮೊದಲಾದವರು ಪಾಲ್ಗೊಂಡಿದ್ದರು.
ನಾಟಕ ಪ್ರದರ್ಶನಕ್ಕೂ ಮೊದಲು ಇತ್ತೀಚಿಗೆ ನಿಧನರಾದ ಹಿಂದೂಸ್ತಾನೀ ಗಾಯಕರು ಹಾಗೂ ಹೊನ್ನಾವರ ಎಸ್‌ಡಿಎಂ ಕಾಲೇಜಿನ ನಿವೃತ್ತ ಸಂಗೀತ ಪ್ರಾಧ್ಯಾಪಕರಾದ ಡಾ.ಅಶೋಕ ಹುಗ್ಗಣ್ಣವರ ಅವರ ನಿಧನಕ್ಕೆ ಎರಡು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.


ನಿಮ್ಮ ಕಾಮೆಂಟ್ ಬರೆಯಿರಿ