ಬೆಂಗಳೂರು: ಬಾವನಿಂದಲೇ ನಾದಿನಿ ಅಪಹರಣವಾದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದ ವರದಿಯಾಗಿದೆ.
ದೇವರಾಜ್ ಸೇರಿ ಮೂವರನ್ನು ಬಂಧಿಸಲಾಗಿದೆ. ಬೆಂಗಳೂರಿನ ಕೊಡುಗೆಹಳ್ಳಿಯಲ್ಲಿ ಈ ಘಟನೆ ನಡೆದಿದೆ. ದೇವರಾಜ್ ಎಂಬಾತ ಅಪಹರಿಸಿದ ಯುವತಿಯ ಅಕ್ಕನನ್ನು ಮದುವೆಯಾಗಿದ್ದ. ನಂತರ ತಂಗಿಯನ್ನು ಮದುವೆ ಆಗುವಂತೆ ಒತ್ತಾಯಿಸಿದ್ದ. ಆದರೆ ನಾದಿನಿ ಬಾವನ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ಕುಪಿತಗೊಂಡ ದೇವರಾಜ್ ಯುವತಿಯನ್ನು ಅಪಹರಿಸಿ ಬಲವಂತವಾಗಿ ಮದುವೆಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ. ಕೊಡಿಗೆಹಳ್ಳಿಯ ರಾಯಲ್ ಮಾರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ, ಜನವರಿ 22 ರಂದು ರಾತ್ರಿ 10 ಗಂಟೆಗೆ ಕೆಲಸ ಮುಗಿಸಿ ಬರುತ್ತಿರುವಾಗ ಆರೋಪಿಗಳು ಕಾರಿನಲ್ಲಿ ಬಂದು ಅವಳನ್ನು ಕಿಡ್ನಾಪ್ ಮಾಡಿದ್ದರು. ಯುವತಿಯನ್ನು ಅಪಹರಿಸಿಕೊಂಡು ಹೋಗಲಾಗಿತ್ತು. ಹಾಸನದ ಸಕಲೇಶಪುರದಲ್ಲಿ ಆರೋಪಿಗಳನ್ನು ಬಂಧನವಾಗಿದ್ದು, ಯುವತಿಯನ್ನು ರಕ್ಷಣೆ ಮಾಡಲಾಗಿದೆ. ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದ ದೇವರಾಜ ಹೆಂಡತಿಯ ಜೊತೆಗೆ ಆಕೆಯ ತಂಗಿಯನ್ನೂ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. 20 ವರ್ಷದ ಯುವತಿ ಇದಕ್ಕೆ ಒಪ್ಪಿರಲಿಲ್ಲ. ಆಗ ಕಿಡ್ನಾಪ್ ಮಾಡಿ ಅವಳನ್ನು ಮದುವೆಯಾಗಲು ದೇವರಾಜ ಯೋಜನೆ ರೂಪಿಸಿದ್ದ ಎನ್ನಲಾಗಿದೆ.
ಈ ಬಗ್ಗೆ ಕೊಡಿಗೇಹಳ್ಳಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಘಟನೆ ಕುರಿತು ಪ್ರಕರಣವನ್ನು ಕೈಗೆತ್ತುಕೊಂಡ ಪೊಲೀಸರು ಯುವತಿಯನ್ನು ರಕ್ಷಣೆ ಮಾಡಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ