ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ : ಡಬ್ಲ್ಯೂ ಎಫ್‌ ಐ ಮಾಜಿ ಮುಖ್ಯಸ್ಥನ ವಿರುದ್ಧ ದೋಷಾರೋಪಣೆ ರೂಪಿಸಲು ಕೋರ್ಟ್‌ ಆದೇಶ

ನವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎನ್ನಲಾದ ಪ್ರಕರಣದಲ್ಲಿ ಡಬ್ಲೂಎಫ್‌ಐ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ ಶರಣ್‌ ಸಿಂಗ್ ವಿರುದ್ಧ ದೋಷಾರೋಪಣೆ ರೂಪಿಸಲು ದೆಹಲಿ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.
ದೆಹಲಿಯ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ACMM) ಪ್ರಿಯಾಂಕಾ ರಜಪೂತ ಅವರು ಈ ಆದೇಶ ಹೊರಡಿಸಿದ್ದಾರೆ.
“1ರಿಂದ 5ರವರೆಗಿನ ಸಂತ್ರಸ್ತೆಯರಿಗೆ ಸಂಬಂಧಿಸಿದಂತೆ ಮೊದಲನೇ ಆರೋಪಿ ಬ್ರಿಜ್‌ ಭೂಷಣ ಶರಣ್‌ ಸಿಂಗ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 354 (ಮಹಿಳೆಯ ಘನತೆಗೆ ಧಕ್ಕೆ), 354ಎ (ಲೈಂಗಿಕ ಕಿರುಕುಳ) ಅಡಿ ಆರೋಪಕ್ಕೆ ಸಂಬಂಧಿಸಿದಂತೆ ಆರೋಪ ನಿಗದಿ ಮಾಡಲು ದಾಖಲೆಯಲ್ಲಿ ಸಾಕಷ್ಟು ಅಂಶಗಳಿವೆ” ಎಂದು ನ್ಯಾಯಾಲಯ ಹೇಳಿದೆ.

“ಆರನೇ ಸಂತ್ರಸ್ತರಿಗೆ ಸಂಬಂಧಿಸಿದಂತೆ ಬ್ರಿಜ್‌ ಭೂಷಣ ಶರಣ್‌ ಸಿಂಗ್‌ ಅವರನ್ನು ಆರೋಪ ಮುಕ್ತಗೊಳಿಸಲಾಗಿದೆ. ಆದರೆ ಮೊದಲನೇ ಸಂತ್ರಸ್ತೆಗೆ ಕ್ರಿಮಿನಲ್‌ ಬೆದರಿಕೆ ಹಾಕಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಹ ಆರೋಪಿಯಾದ ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಸಹಾಯಕ ಕಾರ್ಯದರ್ಶಿ ವಿನೋದ ತೋಮರ್‌ ವಿರುದ್ಧವೂ ದೋಷಾರೋಪಣೆ ಹೊರಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
2023ರ ಜೂನ್‌ 15ರಂದು ಬ್ರಿಜ್‌ ಭೂಷಣ ಶರಣ್‌ ಸಿಂಗ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 354 (ಮಹಿಳೆ ಘನತೆಗೆ ಧಕ್ಕೆ), 354ಎ (ಲೈಂಗಿಕ ಅವಾಚ್ಯ ಶಬ್ದ ಬಳಕೆ), 354ಡಿ (ಹಿಂಬಾಲಿಸುವುದು) ಮತ್ತು 506(1) (ಕ್ರಿಮಿನಲ್‌ ಬೆದರಿಕೆ) ಅಡಿ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು. ಇದಕ್ಕೂ ಮುನ್ನ, ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕೋರಿ ಮಹಿಳಾ ಕುಸ್ತಿಪಟುಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಮುಖ ಸುದ್ದಿ :-   ವೀಡಿಯೊಗಳು..| ಇರಾನಿನ 6 ವಾಯುನೆಲೆಗಳ ಮೇಲೆ ಇಸ್ರೇಲ್‌ ದಾಳಿ ; 15 ವಿಮಾನಗಳು ನಾಶ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement