ಕನ್ನಡ ಚಿತ್ರರಂಗದ ಹಿರಿಯ ನಟಿ ಸುರೇಖಾ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಸುರೇಖಾ (66 ವರ್ಷ ) ಶನಿವಾರ ರಾತ್ರಿ ನಿಧನರಾಗಿದ್ದಾರೆ.
ಡಾ. ರಾಜ್​ಕುಮಾರ್​ ಸೇರಿದಂತೆ ಅನೇಕ ಸ್ಟಾರ್​ ನಟರ ಜೊತೆ ನಟಿಸುವ ಮೂಲಕ ಜನಪ್ರಿಯರಾಗಿದ್ದ ಅವರು ಹಲವು ವರ್ಷಗಳ ಕಾಲ ಚಂದನವನದಲ್ಲಿ ಸಕ್ರಿಯರಾಗಿದ್ದರು. ಶನಿವಾರ (ಜೂ.5) ರಾತ್ರಿ 9.30ರ ಸುಮಾರಿಗೆ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಸುರೇಖಾ ಅವರಿಗೆ ಶನಿವಾರ ಹೃದಯಾಘಾತವಾಗಿದ್ದು, ಹೃದಯಾಘಾತವಾದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಸುರೇಖಾ ಬದುಕುಳಿಯಲಿಲ್ಲ. ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಸುರೇಖಾ ಭರತನಾಟ್ಯ ಮತ್ತು ಕೂಚುಪುಡಿ ನೃತ್ಯ ಕಲಾವಿದೆ ಆಗಿದ್ದರು. 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸುರೇಖಾ ಅಭಿನಯಿಸಿದ್ದರು. ಹಲವು ದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದರು. ಡಾ. ರಾಜ್​ಕುಮಾರ್​ ಅವರ ಹಲವಾರು ಸಿನಿಮಾಗಳಲ್ಲಿ ಸುರೇಖಾ ನಟಿಸಿದ್ದರು.. ಮಾಯಾ ಮನುಷ್ಯ, ನಾನು ಬಾಳಬೇಕು,
ಆಪರೇಷನ್ ಜಾಕ್ ಪಾಟ್​ನಲ್ಲಿ ಸಿಐಡಿ 999, ತ್ರಿಮೂರ್ತಿ, ಒಲವು ಗೆಲುವು, ಗಿರಿ ಕನ್ಯೆ, ಸಾಕ್ಷಾತ್ಕಾರ, ಕಸ್ತೂರಿ ನಿವಾಸ, ಹುಲಿಯ ಹಾಲಿನ ಮೇವು ಮುಂತಾದ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದರು. ಶಿವಕನ್ಯೆ, ಕಾವೇರಿ, ಕೆಸರಿನ ಕಮಲ, ಬ್ಯಾಂಕರ್ ಮಾರ್ಗಯ್ಯ, ಆಲೆಮನೆ, ನಾಗರಹೊಳೆ, ತಾಯಿ ದೇವರು, ಭಕ್ತ ಸಿರಿಯಾಳ ಮುಂತಾದ ಚಿತ್ರಗಳಲ್ಲಿ ಸುರೇಖಾ ಮುಖ್ಯಭೂಮಿಕೆ ನಿಭಾಯಿಸಿದ್ದರು.

ಪ್ರಮುಖ ಸುದ್ದಿ :-   ವಿಧಾನಸೌಧ ಸ್ಫೋಟದ ಎಐ ವಿಡಿಯೊ ಸೃಷ್ಟಿಸಿ ಹಂಚಿಕೊಂಡ ಆರೋಪ : ಕಿಡಿಗೇಡಿ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement