ಚಿಕ್ಕಬಳ್ಳಾಪುರ: ಕೊರೊನಾ ಮಹಾಮಾರಿಯ ಶಕ್ತಿ ಕುಂದಿದ್ದು ಎಲ್ಲವೂ ಸರಿಯಾಗಲಿದೆ. ಆದರೆ ಮುಂದಿನ ದಿನಗಳಲ್ಲಿ ಗಾಳಿ ಗಂಡಾಂತರದಿಂದ ಜನತೆ ತಿನ್ನಲು ಅನ್ನವಿಲ್ಲದೆ, ಕುಡಿಯಲು ನೀರಿಲ್ಲದೆ ನರಳುವ ಪರಿಸ್ಥಿತಿ ಬರುತ್ತದೆ ಎಂದು ಕೋಡಿ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಚಿಕ್ಕಬಳ್ಳಾಪುರ ನಗರಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ಶ್ರೀಗಳು, ಕೊರೊನಾ ಪೂರ್ವದಲ್ಲಿಯೇ ನಾನು ಹೇಳಿದ್ದೆ, ಸಂಕಟ ಬಂದಾಗ ವೆಂಕಟರಮಣ ಎನ್ನುವ ಜನರಿಗೆ ಬುದ್ಧಿ ಕಲಿಸಬೇಕೆನ್ನುವ ಕಾರಣಕ್ಕಾಗಿಯೇ ಕೊರೊನಾ ದೇವರನ್ನು ಹಿಡಿದುಕೊಂಡು ಭೂಮಿಗೆ ಬಂತು. ಕೊರೊನಾ ಅಬ್ಬರ ಎಷ್ಟಿತ್ತು ಎಂಬುದಕ್ಕೆ ದೇವಾಲಯಗಳು ಬಾಗಿಲುಗಳೇ ಮುಚ್ಚಿದವು. ತಿರುಪತಿ, ಧರ್ಮಸ್ಥಳ, ಚಾಮುಂಡೇಶ್ವರಿ ದೇವಾಲಯಗಳ ಬಾಗಿಲು ಹಾಕಿದವು. ಮಠ, ಮಾನ್ಯಗಳು ಬಾಗಿಲು ಹಾಕುವಂತಾಯಿತು ಎಂದು ಹೇಳಿದರು.
ಕೊರೊನಾ ಅಬ್ಬರ ತಗ್ಗಿತು ಎನ್ನುವಾಗ ನೆಲ ಗಂಡಾಂತರ ಪ್ರಾರಂಭವಾಗಿ ಏಕಶಿಲಾ ಪರ್ವತವಾದ ನಂದಿಗಿರಿಧಾಮದ ನೆಲ ಕುಸಿದು ಮಲೆಮಹದೇಶ್ವರ ಬೆಟ್ಟ, ಮಡಿಕೇರಿ ಮೊದಲಾದೆಡೆ ಸಮಸ್ಯೆ ಎದುರಾಯಿತು. ಜೊತೆ ಜಲಗಂಡಾಂತರವೂ ಸಹ ಎದುರಾಗಿ ಜನಜಾನುವಾರು ಸಹಿತ ಸಕಲ ಜೀವರಾಶಿಯನ್ನು ಹಿಂಡಿ ಹಿಪ್ಪೆ ಮಾಡಿತು. ಮುಂದೆ ಗಾಳಿ ಗಂಡಾಂತರ ಜನರನ್ನು ಬಾಧಿಸಲಿದೆ.ಇದು ಕಷ್ಟವನ್ನು ತಂದರೂ ಮುಂದೆ ಹೋಗಲಿದೆ. ಆದರೆ ಇದು ಹೋಗುವ ಕಾಲಕ್ಕೆ ವಿಪರೀತ ಬರಗಾಲ ತಂದು ತಿನ್ನಲು ಅನ್ನವಿಲ್ಲದೆ, ಕುಡಿಯಲು ನೀರಿಲ್ಲದ ಸ್ಥಿತಿ ತಂದೊಡ್ಡಲಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದರು.


ನಿಮ್ಮ ಕಾಮೆಂಟ್ ಬರೆಯಿರಿ