ಚಿಕ್ಕಮಗಳೂರು : ಒಂದು ಕರುವಿಗೆ ಜನ್ಮ ನೀಡಿದ್ದ ಎಮ್ಮೆ ಒಂದು ವಾರದ ನಂತರ ಮತ್ತೊಂದು ಕರುವಿಗೆ ಜನ್ಮ ನೀಡಿ ಅಚ್ಚರಿಗೆ ಕಾರಣವಾಗಿದೆ.
ಈ ಎಮ್ಮೆ ಒಂದು ಕರು ಹಾಕಿ ಎಂಟು ದಿನಗಳ ನಂತರ ಮತ್ತೊಂದು ಕರುವಿಗೆ ಜನ್ಮ ನೀಡಿದ ಅಪರೂಪದ ಘಟನೆ ಚಿಕ್ಕಮಗಳೂರು ಜಿಲ್ಲೆಯ
ಎನ್.ಆರ್.ಪುರ ತಾಲೂಕಿನ ಶಂಕರಪುರ ಸಮೀಪದ ಮಡುಬ ರಸ್ತೆಯಲ್ಲಿರುವ ಹಳಿಯೂರಿನಲ್ಲಿ ನಡೆದಿದೆ.
ಸುಧಾಕರ ಗೌಡ ಎಂಬವರಿಗೆ ಸೇರಿದ ಎಮ್ಮೆ ವಿಚಿತ್ರ ವಿದ್ಯಮಾನಕ್ಕೆ ಕಾರಣವಾಗಿದೆ. ಮೊದಲು ಗಂಡು ಕರು ಹಾಕಿದ್ದ ಎಮ್ಮೆ ಕಳೆದ ಮಂಗಳವಾರ ಬೆಳಗ್ಗೆ ಮತ್ತೊಂದು ಗಂಡು ಕರು ಹಾಕಿದೆ.
ಈ ಘಟನೆಯಿಂದ ಅಚ್ಚರಿಗೊಂಡ ಸುಧಾಕರ ಅವರು, ಸಾಮಾನ್ಯವಾಗಿ ಒಂದು ಹಸು ಒಂದೇ ದಿನದಲ್ಲಿ ಎರಡು ಕರುಗಳಿಗೆ ಜನ್ಮ ನೀಡುವದನ್ನು ನೋಡಿದ್ದೇನೆ. ಆದರೆ ಈ ಎಮ್ಮೆ ಒಂದು ಕರುವಿಗೆ ಜನ್ಮ ನೀಡಿ ಎಂಟು ದಿನಗಳ ನಂತರ ಮತ್ತೊಂದು ಕರುವಿಗೆ ಜನ್ಮ ನೀಡಿದೆ. ಇದನ್ನು ನಾನು ಈವರೆಗೂ ನೋಡಿಲ್ಲ.. ಕೇಳಿಲ್ಲ. ಎಮ್ಮೆಗೆ ಕೃತಕವಾಗಿ ಗರ್ಭಧಾರಣೆ ಮಾಡಿಲ್ಲ. ಈ ಬಗ್ಗೆ ಈಗಾಗಲೇ ಪಶು ಇಲಾಖೆ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದ್ದಾರೆ.
ತಾಲೂಕು ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕರು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಇಂತಹ ಪ್ರಕರಣ ನಡೆಯುತ್ತಿರುವುದು ನನ್ನ ಪ್ರಕಾರ ಇದೇ ಮೊದಲು. ಹಂದಿಗಳು ಸಾಮಾನ್ಯವಾಗಿ ಒಂದು ಹೆರಿಗೆಯ ಒಂದು ವಾರದ ನಂತರ ಮತ್ತೆ ಜನ್ಮ ನೀಡುತ್ತವೆ. ಆದರೆ ಹಸುಗಳು ಮತ್ತು ಎಮ್ಮೆಗಳು ಒಂದೇ ದಿನದಲ್ಲಿ ಕರು ಹಾಕುತ್ತವೆ. ಇದು ಅಪರೂಪದ ವಿದ್ಯಮಾನ ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ