ಕೊಡಗಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ

ಮಡಿಕೇರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಕೊಡಗು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದ ವೇಳೆ ಮಡಿಕೇರಿಯಲ್ಲಿ ಅವರ ವಾಹನದ ಮೇಲೆ ಮೊಟ್ಟೆ ಎಸೆಯಲಾಗಿದೆ.
ಕೊಡಗು ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. `ಕೊಡಗಿನ ವಿರೋಧಿ, ಕೊಡವರ ವಿರೋಧಿ ಸಿದ್ದರಾಮಯ್ಯ’ ಎಂಬಿತ್ಯಾದಿ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಇಲ್ಲಿನ ತಿಮ್ಮಯ್ಯ ವೃತ್ತದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮುಖಾಮುಖಿಯಾದಾಗ ವಾತಾವರಣ ಉದ್ವಿಗ್ನಗೊಂಡಿತ್ತು. ಇದೇ ವೇಳೆ ಸಿದ್ದರಾಮಯ್ಯ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಸಲಾಯಿತು. ನಂತರ ಕೆಲವರು ಅವರ ಕಾರಿನ ಮೇಲೆ ಮೊಟ್ಟೆ ಎಸೆದರು.ಬಳಿಕ ಮಾಜಿ ಮುಖ್ಯಮಂತ್ರಿ ಕಾರಿನ ಮೇಲೆ ಮೊಟ್ಟೆ ಎಸೆದವರನ್ನು ಬಂಧಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಘಟನಾ ಸ್ಥಳಕ್ಕೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ ಎ ಅಯ್ಯಪ್ಪ ಭೇಟಿ ನೀಡಿ ಕಾಂಗ್ರೆಸ್ ಪ್ರತಿಭಟನಾಕಾರರಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಪ್ರಮುಖ ಸುದ್ದಿ :-   ದಾರಿತಪ್ಪಿ ಮಹಾರಾಷ್ಟ್ರ ತಲುಪಿದ್ದ ಹಾವೇರಿ ಜಿಲ್ಲೆಯ ವೃದ್ಧೆ ; ಗೂಗಲ್‌ ಸರ್ಚ್‌, ಚಾಟ್‌ಜಿಪಿಟಿ ನೆರವಿನಿಂದ ಮರಳಿ ಮನೆಗೆ

ಸಿದ್ದರಾಮಯ್ಯ ಇಂದು,ಗುರುವಾರ  ಬೆಳಿಗ್ಗೆ ಕೊಡಗು ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡುವಾಗ ಇಲ್ಲಿನ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಘೇರಾವ್ ಹಾಕಿದ್ದರು.
ಇತ್ತೀಚೆಗಷ್ಟೇ ವೀರ್‌ ಸಾವರ್ಕರ್ ಅವರ ಭಾವಚಿತ್ರವಿರುವ ಪೋಸ್ಟರ್‌ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ವೀರ್‌ ಸಾವರ್ಕರ್ ಅವರ ಚಿತ್ರಗಳನ್ನು ಹಾಕುವುದು ಅನಗತ್ಯ, ಇದು ಅಸ್ತಿತ್ವದಲ್ಲಿರುವ ಉದ್ವಿಗ್ನತೆಯನ್ನು ಪ್ರಚೋದಿಸುತ್ತದೆ ಮತ್ತು ಉಲ್ಬಣಗೊಳಿಸಬಹುದು ಎಂದು ಅವರು ಹೇಳಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಶಿವಮೊಗ್ಗ ಜಿಲ್ಲೆಯಲ್ಲಿ ಕೋಮುಗಲಭೆಗೆ ಕಾರಣವಾಗಿರುವ ಘಟನೆಯನ್ನು ಉಲ್ಲೇಖಿಸಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ ಟಿ ರವಿ ಹಾಗೂ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
ಗುರುವಾರ ಬೆಳಗ್ಗೆ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಿ ಸಿದ್ದರಾಮಯ್ಯಗೆ ಘೇರಾವ್ ಹಾಕಲು ಯತ್ನಿಸಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement