ಬೆಂಗಳೂರು : ಕೋವಿಡ್ ಎರಡನೇ ಅಲೆಯ ಪ್ರಭಾವ ಜೂನ್ ತಿಂಗಳಲ್ಲಿ ತಗ್ಗಲಿದ್ದು, ಮೂರನೇ ಅಲೆ ಎದುರಿಸಲು ಈಗಿನಿಂದಲೇ ಸಜ್ಜಾಗಬೇಕಿದೆ ಎಂದು ಮಣಿಪಾಲ್ ಆಸ್ಪತ್ರೆಗಳ ಚೇರ್ಮನ್ ಡಾ.ಸುದರ್ಶನ ಬಲ್ಲಾಳ ಹೇಳಿದ್ದಾರೆ.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ)ದಿಂದ ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರ ಜವಾಬ್ದಾರಿ ಎಂಬ ವಿಷಯದ ಬಗ್ಗೆ ಏರ್ಪಡಿಸಿದ್ದ ಜೂಮ್ ಸಂವಾದದಲ್ಲಿಅವರು ಮಾತನಾಡಿದರು. ಕೋವಿಡ್ ಮೊದಲ ಅಲೆಯ ಬಳಿಕ ಮುಂಜಾಗ್ರತೆಯ ಕ್ರಮಗಳನ್ನು ಎಲ್ಲರೂ ನಿರ್ಲಕ್ಷಿಸಿದ ಪರಿಣಾಮವಾಗಿ ಈಗ ಸೋಂಕು ವ್ಯಾಪಕವಾಗಿ ಉಲ್ಬಣದ ರೂಪ ತಾಳಿ ಸಾವು ನೋವು ಹೆಚ್ಚಾಗಲು ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕೋವಿಡ್ ಮೂರನೇ ಅಲೆ ಪರಿಣಾಮ ನಿಯಂತ್ರಿಸಲು ಗ್ರಾಮೀಣ ಮಟ್ಟದ ತನಕ ಆರೋಗ್ಯ ವ್ಯವಸ್ಥೆ ಇನ್ನಷ್ಟು ಸುಧಾರಣೆ ಮಾಡಲು ಮೊದಲ ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಸೇರಿದಂತೆ ಎಲ್ಲರ ಪ್ರಯತ್ನವೂ ಮುಖ್ಯವಾಗಿದೆ ಎಂದರು.
ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಅಷ್ಟು ಮುಂದುವರಿದ ಹಾಗೂ ಉತ್ಕೃಷ್ಟ ವೈದ್ಯಕೀಯ ವ್ಯವಸ್ಥೆ ಇರುವ ಅಮೆರಿಕದಲ್ಲಿ ಸೋಂಕಿತರಿಗೆ ಬೆಡ್ ನೀಡಲಾಗದಷ್ಟು ಪರಿಸ್ಥಿತಿ ಹದಗೆಟ್ಟಿತು.ಈಗ ಅಂತಹ ಸ್ಥಿತಿ ಈಗ ನಮ್ಮಲ್ಲೂ ಬಂದೊದಗಿದೆ. ಕಟ್ಟುನಿಟ್ಟಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲು ಜನರು ಸಹಕಾರ ನೀಡಬೇಕಿದೆ ಎಂದು ಹೇಳಿದರು.
ಚೀನಾದಲ್ಲಿ ವೈರಸ್ ಕೃತಕವಾಗಿ ಸೃಷ್ಟಿ ಮಾಡಿದ್ದು ಎನ್ನುವುದಕ್ಕೆ ಯಾವುದೇ ವೈದ್ಯಕೀಯ ಪುರಾವೆಗಳಿಲ್ಲ. ಆದರೆ ಚೀನಾ ಈ ರೋಗದ ಹತೋಟಿ ತರುವಲ್ಲಿ ಪರಿಣಾಮಕಾರಿ ಹಾಗೂ ಕಠಿಣ ಕ್ರಮ ಕೈಗೊಂಡಿತು. ಆದರೆ ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿ ಅಷ್ಟು ಬಿಗಿ ಕ್ರಮ ತೆಗೆದುಕೊಳ್ಳುವುದು ಕಷ್ಟಸಾಧ್ಯವಾಗುತ್ತದೆ ಎಂದರು.
ಕೋವಿಡ್ ಸೋಂಕು ಹೆಚ್ಚು ಜನಸಂದಣಿಯ ಪ್ರದೇಶದಲ್ಲಿ ಗಾಳಿ ಮೂಲಕ ಹರಡುತ್ತಿರುವುದು ಧೃಢವಾಗಿದೆ. ಆದ್ದರಿಂದ ಮಾಸ್ಕ್ ಕಡ್ಡಾಯ ಧರಿಸಬೇಕು. ನಾವಿನ್ನು ಮೂರನೇ ಅಲೆ ಕಡೆಗೆ ಗಮನ ಕೊಡಬೇಕು. ಈ ನಿಟ್ಟಿನಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದಾಗಿದೆ. ಜನರಿಗೆ ವೈದ್ಯಕೀಯ ಮಾಹಿತಿ ನೀಡಿ ಅವರನ್ನು ಮಾನಸಿಕ ಸದೃಢಗೊಳಿಸುವುದು ಇಂದಿನ ತುರ್ತು ಅಗತ್ಯ ಹಾಗೂ ಅನಿವಾರ್ಯವಾಗಿದೆ ಎಂದರು.
ಎರಡನೇ ಅಲೆಯ ಸಂದರ್ಭದಲ್ಲಿ 20 ರಿಂದ 50 ವರ್ಷದೊಳಗಿನ ವಯಸ್ಸಿನವರಲ್ಲಿ ಸಾವು ನೋವು ಹೆಚ್ಚಾಗಿರುವುದು ಕಂಡುಬಂದಿದೆ. ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎನ್ನುವ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಮುಂಜಾಗ್ರತೆಯೇ ಕೋವಿಡ್ಗೆ ದೊಡ್ಡ ಮದ್ದು ಎಂದು ಹೇಳಿದರು.


ನಿಮ್ಮ ಕಾಮೆಂಟ್ ಬರೆಯಿರಿ