ಚೆನ್ನೈ: ತಮಿಳುನಾಡಿನ ಖ್ಯಾತ ನಟ ಶಿವಕಾರ್ತಿಕೇಯನ್ ಅಭಿನಯದ ಇತ್ತೀಚಿನ ಚಿತ್ರ ‘ಪರಾಶಕ್ತಿ’ (Parasakthi) ಇದೀಗ ದೊಡ್ಡ ವಿವಾದಕ್ಕೆ ಗುರಿಯಾಗಿದೆ. ಈ ಚಿತ್ರದಲ್ಲಿ ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿರುವ ತಮಿಳುನಾಡು ಯೂತ್ ಕಾಂಗ್ರೆಸ್, ಚಿತ್ರವನ್ನು ತಕ್ಷಣವೇ ನಿಷೇಧಿಸಬೇಕೆಂದು ಒತ್ತಾಯಿಸಿದೆ.
ಸುಧಾ ಕೊಂಗರ ಪ್ರಸಾದ ನಿರ್ದೇಶನದ ಈ ಸಿನಿಮಾ ಜನವರಿ 10 ರಂದು ಬಿಡುಗಡೆಯಾಗಿತ್ತು. 1960 ರ ದಶಕದ ವಿದ್ಯಾರ್ಥಿ ಚಳವಳಿ ಮತ್ತು ಹಿಂದಿ ವಿರೋಧಿ ಪ್ರತಿಭಟನೆಗಳ ಕಥಾಹಂದರವನ್ನು ಇದು ಹೊಂದಿದೆ.
ಯೂತ್ ಕಾಂಗ್ರೆಸ್ ಅಧ್ಯಕ್ಷ ಭಾಸ್ಕರ ಅವರು ಚಿತ್ರದ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. 1965 ರ ಭಾಷಾ ವಿವಾದದ ಸಮಯದಲ್ಲಿ ಪೋಸ್ಟ್ ಆಫೀಸ್ ಫಾರ್ಮ್‌ಗಳನ್ನು ಹಿಂದಿಯಲ್ಲಿ ಮಾತ್ರ ಭರ್ತಿ ಮಾಡಬೇಕು ಎಂದು ಕಾಂಗ್ರೆಸ್ ಸರ್ಕಾರ ಆದೇಶಿಸಿತ್ತು ಎಂದು ಚಿತ್ರದಲ್ಲಿ ತೋರಿಸಲಾಗಿದೆ.
ಇದು ಸಂಪೂರ್ಣ ಸುಳ್ಳು ಮತ್ತು ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ಎಂದು ಭಾಸ್ಕರ ಕಿಡಿಕಾರಿದ್ದಾರೆ.
ಚಿತ್ರದಲ್ಲಿ ಶಿವಕಾರ್ತಿಕೇಯನ್ ಪಾತ್ರವು ಫೆಬ್ರವರಿ 12 ರಂದು ಇಂದಿರಾ ಗಾಂಧಿಯವರು ಕೊಯಮತ್ತೂರಿ ಬಂದಾಗ ಅವರನ್ನು ಭೇಟಿಯಾಗಿ ಹಿಂದಿ ಹೇರಿಕೆಯನ್ನು ವಿರೋಧಿಸುವಂತೆ ತೋರಿಸಲಾಗಿದೆ. ಆದರೆ, ಫೆಬ್ರವರಿ 12 ರಂದು ಇಂದಿರಾ ಗಾಂಧಿಯವರು ಕೊಯಮತ್ತೂರಿಗೆ ಭೇಟಿಯೇ ನೀಡಿಲ್ಲ. ಇದು ಕಾಲ್ಪನಿಕ ಮತ್ತು ದಾರಿತಪ್ಪಿಸುವ ದೃಶ್ಯ ಎಂದು ಅವರು ಆಕ್ಷೇಪಿಸಿದ್ದಾರೆ.
ಇಂದಿರಾ ಗಾಂಧಿಯವರ ಎದುರೇ ರೈಲಿಗೆ ಬೆಂಕಿ ಹಚ್ಚುವ ದೃಶ್ಯವನ್ನು ತೋರಿಸಲಾಗಿದ್ದು, ಇದು ವಾಸ್ತವಕ್ಕೆ ದೂರವಾಗಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ, ಕೆ. ಕಾಮರಾಜ್ ಮತ್ತು ಇಂದಿರಾ ಗಾಂಧಿಯವರ ಫೋಟೋಗಳನ್ನು ಬಳಸಲಾಗಿದೆ. ಅಲ್ಲದೆ, ಕಾಂಗ್ರೆಸ್ ಸರ್ಕಾರ ತಮಿಳುನಾಡಿನ ಪೊಳ್ಳಾಚಿಯಲ್ಲಿ 200 ಕ್ಕೂ ಹೆಚ್ಚು ಜನರನ್ನು ಗುಂಡಿಕ್ಕಿ ಕೊಂದಿದೆ ಎಂದು ತೋರಿಸಲಾಗಿದೆ. ಇದಕ್ಕೆ ಯಾವುದೇ ಐತಿಹಾಸಿಕ ಸಾಕ್ಷ್ಯಗಳಿಲ್ಲ ಎಂದು ಭಾಸ್ಕರ ಹೇಳಿದ್ದಾರೆ.
ಚಿತ್ರತಂಡವು ತಕ್ಷಣವೇ ವಿವಾದಾತ್ಮಕ ದೃಶ್ಯಗಳನ್ನು ತೆಗೆದುಹಾಕಬೇಕು ಮತ್ತು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಭಾಸ್ಕರ ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಮತ್ತು ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
‘ಪರಾಶಕ್ತಿ’ ಚಿತ್ರದಲ್ಲಿ ಶಿವಕಾರ್ತಿಕೇಯನ್ ಜೊತೆಗೆ ರವಿ ಮೋಹನ, ಅಥರ್ವ ಮತ್ತು ಶ್ರೀಲೀಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಸೆನ್ಸಾರ್ ಮಂಡಳಿಯು ಈ ಚಿತ್ರದ 25 ದೃಶ್ಯಗಳಿಗೆ ಕತ್ತರಿ ಹಾಕಿದೆ ಎಂಬುದು ಗಮನಾರ್ಹ.


ನಿಮ್ಮ ಕಾಮೆಂಟ್ ಬರೆಯಿರಿ