ಅಂಕೋಲಾ ಉದ್ಯಮಿ ಆರ್‌.ಎನ್. ನಾಯಕ್ ಹತ್ಯೆ ಪ್ರಕರಣ: ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 9 ಮಂದಿ ದೋಷಿಗಳು ಎಂದ ಬೆಳಗಾವಿ ಕೋಕಾ ನ್ಯಾಯಾಲಯ

ಬೆಳಗಾವಿ: ಒಂಬತ್ತು ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ ಉದ್ಯಮಿ ಆರ್‌ಎನ್ ನಾಯಕ್ ಹತ್ಯೆ ಪ್ರಕರಣದಲ್ಲಿ 2015 ರಲ್ಲಿ ಮೊರಾಕೊದಿಂದ ಹಸ್ತಾಂತರಿಸಲ್ಪಟ್ಟ ಕುಖ್ಯಾತ ದರೋಡೆಕೋರ ಬನ್ನಂಜೆ ರಾಜ ಮತ್ತು ಇತರ ಎಂಟು ಮಂದಿ ದೋಷಿಗಗಳು ಎಂದು ಬೆಳಗಾವಿಯ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಸಿಒಸಿಎ- ಕೋಕಾ) ವಿಶೇಷ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.
ನ್ಯಾಯಾಧೀಶ ಸಿ.ಎಂ‌. ಜೋಶಿ ಅವರು ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದ್ದು ಇದೇ ಏಪ್ರಿಲ್ 4ರಂದು ಪ್ರಕಟಿಸಲಿದ್ದಾರೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಹೇಳಿದೆ.
ವರದಿ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಹದಿನಾರು ಮಂದಿ ವಿರುದ್ಧ ಆರೋಪ ಹೊರಿಸಲಾಗಿತ್ತು. ಅವರಲ್ಲಿ ಮೂವರು ತಲೆಮರೆಸಿಕೊಂಡಿದ್ದರು. ಮೂವರನ್ನು ನಿರ್ದೋಷಿಗಳೆಂದು ನ್ಯಾಯಾಲಯ ಹೇಳಿದೆ. ಉತ್ತರ ಪ್ರದೇಶದ ಜಗದೀಶ್‌ ಪಟೇಲ್‌, ಬೆಂಗಳೂರಿನ ಅಭಿ ಭಂಡಗಾರ, ಉಡುಪಿಯ ಗಣೇಶ್‌ ಭಜಂತ್ರಿ, ಕೇರಳದ ಕೆ ಎಂ ಇಸ್ಮಾಯಿಲ್‌, ಹಾಸನದ ಮಹೇಶ್‌ ಅಚ್ಚಂಗಿ, ಕೇರಳದ ಎಂ ಬಿ ಸಂತೋಷ, ಉಡುಪಿಯ ಬನ್ನಂಜೆ ರಾಜ, ಬೆಂಗಳೂರಿನ ಜಗದೀಶ್‌ ಚಂದ್ರರಾಜ್‌, ಉತ್ತರ ಪ್ರದೇಶದ ಅಂಕಿತಕುಮಾರ್‌ ಕಶ್ಯಪ್‌ ದೋಷಿಗಳೆಂದು ನ್ಯಾಯಾಲಯ ಹೇಳಿದೆ.
ಇದೇ ವೇಳೆ ಕೇರಳದ ರಬ್ದಿನ್‌ ಫಿಚೈ, ಬೆಂಗಳೂರಿನ ಮಹಮದ್‌ ಶಾಬಂದರಿ ಹಾಗೂ ಉತ್ತರ ಕನ್ನಡದ ಆನಂದ್‌ ರಮೇಶ್‌ ನಾಯಕ್‌ ಪ್ರಕರಣದಲ್ಲಿ ದೋಷಮುಕ್ತರಾಗಿದ್ದಾರೆ.
2013ರ ಡಿಸೆಂಬರ್ 21ರಂದು ಅಂಕೋಲಾದಲ್ಲಿ ನಡೆದ ಆರ್ ಎನ್ ನಾಯಕ್​ ಕೊಲೆ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಕೋಕಾ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿತ್ತು. 7 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಇಂದು ತೀರ್ಪು ಹೊರಬಿದ್ದಿತು.
3 ಕೋಟಿ ರೂ.ಗಳ ಹಫ್ತಾ ನೀಡದಿದ್ದರೆ ಉದ್ಯಮಿ ನಾಯಕ್‌ ಅವರನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಲಾಗಿತ್ತು. ಈ ಸಂಬಂಧ ನಾಯಕ್‌ ಅಂಕೋಲಾ ಠಾಣೆಯಲ್ಲಿ ದೂರು ನೀಡಿದ್ದರು. 2013ರ ಡಿಸೆಂಬರ್ 21ರಂದು ನಾಯಕ್‌ ಅವರನ್ನು ಉತ್ತರ ಪ್ರದೇಶದ ಶಾರ್ಪ್‌ ಶೂಟರ್‌ ವಿವೇಕ್‌ ಉಪಾಧ್ಯಾಯ ಗುಂಡಿಕ್ಕಿ ಹತ್ಯೆ ಮಾಡಿದ್ದ. ತಕ್ಷಣವೇ ಆರ್‌ ಎನ್‌ ನಾಯಕ್‌ ಅವರ ಗನ್‌ಮ್ಯಾನ್‌ ವಿವೇಕನನ್ನು ಬೆನ್ನತ್ತಿ ಗುಂಡಿಟ್ಟು ಕೊಂದಿದ್ದರು. ಘಟನೆ ನಡೆದ ಮರುದಿನ ಕೆಲ ಮಾಧ್ಯಮಗಳಿಗೆ ಫೋನ್‌ ಮಾಡಿದ್ದ ಬನ್ನಂಜೆ ರಾಜ ತಾನೇ ಹತ್ಯೆ ಮಾಡಿದ್ದಾಗಿ ಹೇಳಿಕೊಂಡಿದ್ದ.

ಪ್ರಮುಖ ಸುದ್ದಿ :-   ಲೈಂಗಿಕ ದೌರ್ಜನ್ಯ ಪ್ರಕರಣ: ಮಹಿಳೆ ಅಪಹರಣ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಬಂಧನ

ಕೋಕಾದಡಿಯ ಮೊದಲ ಪ್ರಕರಣ
2000ನೇ ಇಸವಿಯಲ್ಲಿ ರೂಪುಗೊಂಡ ಕೋಕಾ ಕಾಯಿದೆ ರೂಪುಗೊಂಡಿತ್ತು. ಕಾಯಿದೆ ರೂಪುಗೊಂಡ ಬಳಿಕ ಬನ್ನಂಜೆ ರಾಜ ವಿರುದ್ಧವೇ ಮೊದಲ ಪ್ರಕರಣ ದಾಖಲಾಗಿತ್ತು. ಮೊರಕ್ಕೊದಲ್ಲಿ 2015ರ ಫೆಬ್ರವರಿ 12ರಂದು ಬಂಧಿತನಾಗಿದ್ದ ರಾಜನನ್ನು ಭಾರತಕ್ಕೆ ಕರೆತರಲಾಗಿತ್ತು. 2015ರ ಆಗಸ್ಟ್ 14ರಂದು ಬನ್ನಂಜೆ ರಾಜಾನನ್ನು ಕರೆತಂದು ಬೆಳಗಾವಿ ಕೋಕಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಐಪಿಎಸ್‌ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ 2021ರ ಡಿಸೆಂಬರ್‌ 21ರಂದು ಸಾಕ್ಷ್ಯ ನುಡಿದಿದ್ದರು. ಪೊಲೀಸ್‌ ಇಲಾಖೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದ ಅವರು ಅದಕ್ಕೂ ಮುನ್ನ ನಾಯಕ್‌ ಕೊಲೆ ಪ್ರಕರಣದ ತನಿಖಾಧಿಕಾರಿ ಆಗಿದ್ದರು. ಅವರೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರತಾಪ್ ರೆಡ್ಡಿ, ಅಲೋಕ್ ಕುಮಾರ್, ಮಾಜಿ ಪೊಲೀಸ್ ‌ಅಧಿಕಾರಿಗಳಾದ ಭಾಸ್ಕರ್ ರಾವ್ ಸೇರಿದಂತೆ ಒಟ್ಟು 210 ಮಂದಿ ಸಾಕ್ಷ್ಯ ನುಡಿದಿದ್ದಾರೆ. 1,027 ದಾಖಲೆ ಪತ್ರಗಳು ಹಾಗೂ 138 ಪುರಾವೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಕೆ ಜಿ ಪುರಾಣಿಕಮಠ ಹಾಗೂ ವಿಶೇಷ ಅಭಿಯೋಜಕ ಶಿವಪ್ರಸಾದ್‌ ಆಳ್ವ ವಾದಿಸಿದ್ದರು.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement