ಬೆಂಗಳೂರು : ಬುಧವಾರ ವಿಧಿವಶರಾದ ಕನ್ನಡದ ಖ್ಯಾತ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ (94) ಅವರ ಸಾವಿಗೆ ಬಹುಭಾಷಾ ನಟ ಕಮಲ ಹಾಸನ್ ಸಂತಾಪ ಸೂಚಿಸಿದ್ದಾರೆ. ಭೈರಪ್ಪನವರು ನಮ್ಮ ಕಾಲದ ಶ್ರೇಷ್ಠ ಸಾಹಿತ್ಯಿಕ ಧ್ವನಿಗಳಲ್ಲಿ ಒಬ್ಬರಾಗಿದ್ದರು ಎಂದು ಕಮಲ್ ಹಾಸನ್ ಹೇಳಿದ್ದಾರೆ.
ʼನಮ್ಮ ಕಾಲದ ಕಥೆಗಾರರ ಪಿತಾಮಹ ಎಸ್. ಎಲ್. ಭೈರಪ್ಪ ಅವರು ನಮ್ಮೊಂದಿಗಿದ್ದಾಗಲೇ ಅವರನ್ನು ಸಂಭ್ರಮದಿಂದ ಗೌರವಿಸಿದ್ದೇವೆ ಮತ್ತು ಅವರು ಕೂಡ ಆ ಸಂಭ್ರಮವನ್ನು ಕಣ್ತುಂಬಿಕೊಂಡಿದ್ದಾರೆ. ಅವರ ಕುಟುಂಬ ಮತ್ತು ಅಭಿಮಾನಿಗಳ ಅಸಂಖ್ಯ ಸಮೂಹಕ್ಕೆ ನನ್ನ ಸಂತಾಪಗಳು. ಕನ್ನಡಿಗರು ನಮ್ಮ ಕಾಲದ ಶ್ರೇಷ್ಠ ಸಾಹಿತ್ಯಿಕ ಧ್ವನಿಗಳನ್ನು ಈ ಜಗತ್ತಿಗೆ ನೀಡಿದ್ದಾರೆ, ಮತ್ತು ಈಗ ಅವರ ಅಮರ ಕೃತಿಗಳು ಮಹಾನ್ ಕಥೆಗಾರರ ಲೋಕಕ್ಕೆ ಸೇರಿದವು. ಭವಿಷ್ಯದ ತಲೆಮಾರಿಗೆ ಅವರು ಬರೆದ ಪದಗಳಿಂದ ಶಾಶ್ವತತೆಯನ್ನು ಕಲಿಯಬಹುದು. ಅವರ ಪರಂಪರೆಯು ‘ಪರ್ವ’ಗಳನ್ನು ಮೀರಿ ಸಾಗಲಿದೆ. ಪೌರಾಣಿಕತೆಯನ್ನು ಮತ್ತು ಅದರೊಳಗೆ ಹುದುಗಿಕೊಂಡ ಇತಿಹಾಸಗಳನ್ನು ಓದುವ ಕಲೆಯನ್ನು ನಮಗೆ ಕಲಿಸಿದಕ್ಕಾಗಿ ಧನ್ಯವಾದಗಳು ಸರ್.
ಅಭಿಮಾನಿ,
ಕಮಲ್ ಹಾಸನ್ʼ
ಎಂದು ಎಕ್ಸ್‌ನಲ್ಲಿ ಕಮಲ್ ಹಾಸನ್ ಪೋಸ್ಟ್ ಮಾಡಿದ್ದಾರೆ.
ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ….
ಭೈರಪ್ಪನವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅವಕಾಶ ಮಾಡಲಾಗಿತ್ತು. ಮಧ್ಯಾಹ್ನ 2 ಗಂಟೆಯ ಬಳಿಕ ಶರೀರವನ್ನು ಮೈಸೂರಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಮೈಸೂರಿನ ಕಲಾ ಮಂದಿರದಲ್ಲಿ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಕನ್ನಡದ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ