ರಾಮ ಮಂದಿರ ಟ್ರಸ್ಟ್‌ನಿಂದ ಚಂಪತ್ ರಾಯ್‌ ರಾಜೀನಾಮೆ ಅಂಗೀಕಾರ; ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಮೋಹನ ನೇಮಕ

ಅಯೋಧ್ಯೆ : ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ರಾಮ ಮಂದಿರದ ದೇಣಿಗೆ ದುರುಪಯೋಗ ಆರೋಪಗಳ ನಡುವೆ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ ಹಾಗೂ ಟ್ರಸ್ಟಿ ಡಾ. ಅನಿಲ ಮಿಶ್ರಾ ಅವರ ರಾಜೀನಾಮೆಯನ್ನು ಟ್ರಸ್ಟ್ ಅಂಗೀಕರಿಸಿದೆ ಎಂದು ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದದೇವ ಗಿರಿ ಮಹಾರಾಜ ಸೋಮವಾರ ತಿಳಿಸಿದ್ದಾರೆ.
ಚಂಪತ್ ರಾಯ್‌ ಅವರ ಸ್ಥಾನಕ್ಕೆ ಕೃಷ್ಣ ಮೋಹನ ಅವರನ್ನು ಟ್ರಸ್ಟ್‌ನ ಹಂಗಾಮಿ ಮಹಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದರು.
ದೇವಾಲಯ ಆವರಣದ ಅತಿಥಿಗೃಹದಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಆಗಿರಲಿ ಅವರನ್ನು ಕಾನೂನಿನ ಮುಂದೆ ತಂದು ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಯಾವುದೇ ಪಕ್ಷದ ಹೆಸರನ್ನು ಉಲ್ಲೇಖಿಸದೇ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಸ್ವಾಮಿ ಗೋವಿಂದ ದೇವ ಗಿರಿ ಮಹಾರಾಜ, ಈ ಪ್ರಕರಣವನ್ನು ರಾಜಕೀಯಗೊಳಿಸಲು ಕೆಲವು ರಾಜಕೀಯ ಪಕ್ಷಗಳು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.
ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಂತಿಮ ವರದಿ ಬಿಡುಗಡೆಯಾದ ಬಳಿಕ ಜುಲೈ 22ರಂದು ಮತ್ತೊಂದು ಸಭೆ ನಡೆಸಲಾಗುವುದು ಎಂದೂ ಹೇಳಿದರು.
“ನಮ್ಮ ಟ್ರಸ್ಟ್ ಪಾರದರ್ಶಕ ಹಾಗೂ ದೋಷರಹಿತ ಆಡಳಿತಕ್ಕೆ ಸಂಪೂರ್ಣ ಬದ್ಧವಾಗಿದೆ. ಇದಕ್ಕಾಗಿ ನಿರ್ದಿಷ್ಟ ಅಧಿಕಾರಿಗಳನ್ನು ನೇಮಕ ಮಾಡುವ ಉದ್ದೇಶದಿಂದ ಸಣ್ಣ ಸಮಿತಿಯನ್ನು ರಚಿಸಿದ್ದೇವೆ. ಮುಂದೆಯೂ ಇದೇ ರೀತಿಯಲ್ಲಿ ಕಾರ್ಯವನ್ನು ಮುಂದುವರಿಸುತ್ತೇವೆ” ಎಂದು ಅವರು ಹೇಳಿದರು.
“ಜುಲೈ 22ರಂದು ಮತ್ತೆ ಸಭೆ ನಡೆಸಲಿದ್ದೇವೆ. ಅಷ್ಟರೊಳಗೆ ಎಸ್‌ಐಟಿ ಅಂತಿಮ ವರದಿ ಸಲ್ಲಿಸುವ ನಿರೀಕ್ಷೆಯಿದೆ. ಆ ವರದಿಯನ್ನು ಪರಿಶೀಲಿಸಿ, ಅಗತ್ಯವಿದ್ದರೆ ಹೊಸ ಟ್ರಸ್ಟಿಗಳ ನೇಮಕದ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುವುದು. ಕಳ್ಳತನ ಎಂದರೆ ಕಳ್ಳತನವೇ. ಅದರ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆ. ಅದು ಆಡಳಿತದ ಜವಾಬ್ದಾರಿಯಾಗಿದೆ” ಎಂದು ಅವರು ಹೇಳಿದರು.
ಈ ಬೆಳವಣಿಗೆಗೆ ಮುನ್ನ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡದ ತನಿಖೆಯ ಮೇಲಿನ ವಿಶ್ವಾಸವನ್ನು ವ್ಯಕ್ತಪಡಿಸಲು ಟ್ರಸ್ಟ್ ದೇವಾಲಯದ ಅತಿಥಿಗೃಹದಲ್ಲಿ ಉನ್ನತ ಮಟ್ಟದ ಸಭೆ ನಡೆಸಿತ್ತು.
ಪ್ರಕರಣದ ಕೇಂದ್ರಬಿಂದುವಾಗಿರುವ ಚಂಪತ್ ರಾಯ್ ಅವರ ಆಪ್ತ ಸಹಚರ ರಾಮಾಶಂಕರ ಅಲಿಯಾಸ್ ಟಿನ್ನು ಯಾದವ್ ಸೇರಿದಂತೆ ಎಂಟು ಮಂದಿಯನ್ನು ಎಸ್‌ಐಟಿ ಈಗಾಗಲೇ ಬಂಧಿಸಿದೆ. ಚಂಪತ್ ರಾಯ್‌ ಹಾಗೂ ಡಾ. ಅನಿಲ ಮಿಶ್ರಾ ಅವರನ್ನು ಎಸ್‌ಐಟಿ ಮತ್ತು ಅಯೋಧ್ಯೆ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರೂ, ಇದುವರೆಗೆ ಅವರ ವಿರುದ್ಧ ಯಾವುದೇ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿಲ್ಲ.
ಸೋಮವಾರ ನಡೆದ ಟ್ರಸ್ಟ್ ಸಭೆಯಲ್ಲಿ 89 ವರ್ಷದ ಅಧ್ಯಕ್ಷ ನೃತ್ಯ ಗೋಪಾಲ ದಾಸ್ ಸೇರಿದಂತೆ ಬಹುತೇಕ ಟ್ರಸ್ಟಿಗಳು ಭಾಗವಹಿಸಿದ್ದರು. ಆದರೆ, ತಮ್ಮ ರಾಜೀನಾಮೆ ಕುರಿತು ಚರ್ಚೆ ನಡೆಯಲಿದ್ದ ಕಾರಣ ಚಂಪತ್ ರಾಯ್‌ ಮತ್ತು ಡಾ. ಅನಿಲ ಮಿಶ್ರಾ ಸಭೆಗೆ ಗೈರಾಗಿದ್ದರು.
ಸಭೆ ಆರಂಭಕ್ಕೂ ಕೆಲವೇ ಗಂಟೆಗಳ ಮುನ್ನ ಪ್ರತಿಕ್ರಿಯೆ ನೀಡಿದ್ದ ನೃತ್ಯ ಗೋಪಾಲದಾಸ್, ದೇವಾಲಯದಲ್ಲಿ ನಡೆದಿರುವ ಎನ್ನಲಾದ ಹಣದ ಕಳ್ಳತನದಿಂದ ತೀವ್ರ ದುಃಖವಾಗಿದೆ ಎಂದು ಹೇಳಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ಜೊತೆಗೆ, ಈ ಪ್ರಕರಣವನ್ನು ರಾಜಕೀಯಗೊಳಿಸಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
ಇನ್ನೊಂದೆಡೆ, ಎಸ್‌ಐಟಿ ಮತ್ತು ಅಯೋಧ್ಯೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು, ಬಂಧಿತ ಎಂಟು ಆರೋಪಿಗಳ ಮನೆಗಳಿಂದ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಅಳಿಸಿ ಹಾಕಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನೂ ಮರುಪಡೆಯಲಾಗಿದ್ದು, ಅದರಲ್ಲಿ ಆರೋಪಿಗಳು ದೇವಾಲಯದ ಆವರಣದಿಂದಹೋಗುವ ವೇಳೆ ಕರೆನ್ಸಿ ನೋಟುಗಳನ್ನು ಅಡಗಿಸಿಟ್ಟುಕೊಳ್ಳುತ್ತಿರುವ ದೃಶ್ಯಗಳು ಪತ್ತೆಯಾಗಿವೆ ಎಂದು ತನಿಖಾ ಮೂಲಗಳು ತಿಳಿಸಿವೆ.
ಪ್ರಕರಣದ ತನಿಖೆಯ ಭಾಗವಾಗಿ ಟ್ರಸ್ಟ್‌ನ ಕಳೆದ ಐದು ವರ್ಷಗಳ ಹಣಕಾಸು ವ್ಯವಹಾರಗಳ ಲೆಕ್ಕಪರಿಶೋಧನಾ (ಆಡಿಟ್) ವರದಿಗಳನ್ನು ಪರಿಶೀಲಿಸುವ ಸಾಧ್ಯತೆಯನ್ನೂ ಎಸ್‌ಐಟಿ ಪರಿಶೀಲಿಸುತ್ತಿದೆ. ಆದರೆ, ಟ್ರಸ್ಟ್‌ನ ಹಣಕಾಸು ವ್ಯವಸ್ಥೆ ಸಂಪೂರ್ಣ ಪಾರದರ್ಶಕವಾಗಿದೆ ಎಂದು ಖಜಾಂಚಿ ಸ್ವಾಮಿ ಗೋವಿಂದ ದೇವ ಗಿರಿ ಮಹಾರಾಜ ಪುನರುಚ್ಚರಿಸಿದ್ದಾರೆ. ಆದಾಗ್ಯೂ, ದೇವಾಲಯದ ದೇಣಿಗೆ ಹಣದ ಅಕ್ರಮ ವರ್ಗಾವಣೆ ಆರೋಪಗಳ ಹಿನ್ನೆಲೆಯಲ್ಲಿ ಟ್ರಸ್ಟ್‌ನ ಹಣಕಾಸು ನಿರ್ವಹಣೆ ಬಗ್ಗೆ ಪ್ರಶ್ನೆಗಳು ಮುಂದುವರಿದಿವೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement