ರಾಯಚೂರಿನಲ್ಲಿ ಏಮ್ಸ್‌ ಸ್ಥಾಪನೆ: ಕೇಂದ್ರ ಸಚಿವರಿಗೆ ಸಿದ್ದರಾಮಯ್ಯ ಪತ್ರ

ಬೆಂಗಳೂರು: ರಾಯಚೂರಿನಲ್ಲಿ ಏಮ್ಸ್‌ (AIIMS) ಸ್ಥಾಪನೆ ಮಾಡುವಂತೆ ಒತ್ತಾಯಿಸಿ ಕೇಂದ್ರ ಆರೋಗ್ಯ ಸಚಿವ ಮನಸುಖ್‌ ಮಾಂಡವೀಯ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ.
ಈ ಬಗ್ಗೆ ಶನಿವಾರ ಪತ್ರ ಬರೆದಿರುವ ಅವರು,‌ “ರಾಯಚೂರಿನಲ್ಲಿ ಆರೋಗ್ಯ, ಶಿಕ್ಷಣದ ಮಟ್ಟ ಮತ್ತು ತಲಾ ಆದಾಯವು ಇತರ ಪ್ರದೇಶಗಳಿಗಿಂತ ಕಡಿಮೆ ಇದೆ. ವಿಪರೀತ ಹವಾಗುಣದಿಂದಾಗಿ ಭೌಗೋಳಿಕವಾಗಿಯೂ ಪ್ರತಿಕೂಲ ವಾತಾವರಣ ಹೊಂದಿದೆ. ಈ ಎಲ್ಲ ಕಾರಣಗಳಿಂದಾಗಿ ರಾಯಚೂರಿನಲ್ಲಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳ ಅಗತ್ಯವಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಏಮ್ಸ್‌ ಸ್ಥಾಪನೆಯಿಂದ ಈ ಭಾಗಕ್ಕೆ ವಿಶ್ವದರ್ಜೆಯ ವೈದ್ಯಕೀಯ ಸೌಲಭ್ಯ ಒದಗಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.
ಏಮ್ಸ್‌ ಸ್ಥಾಪನೆಗೆ ಈ ಭಾಗದ ಜನತೆ ಹಾಗೂ ಜನಪ್ರತಿನಿಧಿಗಳ ಬೇಡಿಕೆ ಹೆಚ್ಚುತ್ತಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ನಮ್ಮ ಅತ್ಯಾದ್ಯತೆಯ ವಿಷಯವಾಗಿದೆ. ಆದ್ದರಿಂದ ಸಂಬಂಧಿಸಿದವರಿಗೆ ಈ ಕುರಿತು ಕ್ರಮ ಕೈಗೊಳ್ಳಲು ಸೂಚನೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸಚಿವರನ್ನು ಕೋರಿದ್ದಾರೆ.
ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ಸ್. ಭೋಸರಾಜು ಅವರು ರಾಯಚೂರಿನಲ್ಲಿ ಏಮ್ಸ್‌ ಸ್ಥಾಪಿಸುವ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಇತ್ತೀಚೆಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಮುಖ್ಯಮಂತ್ರಿಯವರು ಈಗ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿಯೇ ಏಮ್ಸ್ ಸ್ಥಾಪಿಸುವಂತೆ ಆಗ್ರಹಿಸಿ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ 2022ರ ಮೇ 12ರಂದು ಧರಣಿ ಆರಂಭಿಸಿತ್ತು. ಈ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಈಗಾಗಲೇ 400 ದಿನಗಳನ್ನು ಪೂರೈಸಿದೆ.

ಪ್ರಮುಖ ಸುದ್ದಿ :-   ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಲ್ಲೂ ತಮ್ಮ ಪಕ್ಷದಿಂದ ಸ್ಪರ್ಧೆ ; ಮಾಜಿ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement