ಕರ್ನಾಟಕದಲ್ಲಿ ಕಾರ್ಮಿಕರ ಕನಿಷ್ಠ ವೇತನ ಶೇ. 60ರಷ್ಟು ಹೆಚ್ಚಳ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು : ರಾಜ್ಯ ಸರ್ಕಾರವು ಶನಿವಾರ (ಮೇ 23) ಕಾರ್ಮಿಕರ ಕನಿಷ್ಠ ವೇತನವನ್ನು ಶೇಕಡಾ 60 ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಪರಿಷ್ಕೃತ ವ್ಯವಸ್ಥೆಯಡಿ ಬೆಂಗಳೂರಿನ ಕಾರ್ಮಿಕರು ಇನ್ಮುಂದೆ ಮಾಸಿಕ ಕನಿಷ್ಠ 23,376 ರೂಪಾಯಿ ವೇತನ ಪಡೆಯಲಿದ್ದಾರೆ.
ಈ ನಿರ್ಧಾರವನ್ನು ಪ್ರಕಟಿಸಿದ ಕಾರ್ಮಿಕ ಖಾತೆ ಸಚಿವ ಸಂತೋಷ ಲಾಡ್ ಅವರು, “ಈ ಕ್ರಮವು ಕಾರ್ಮಿಕರ ಆರ್ಥಿಕ ಭದ್ರತೆಯನ್ನು ಬಲಪಡಿಸಲಿದೆ ಮತ್ತು ರಾಜ್ಯಾದ್ಯಂತ ಕಾರ್ಮಿಕ ಸಮುದಾಯದ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಲಿದೆ ಎಂದು ತಿಳಿಸಿದ್ದಾರೆ.
ಹೊಸ ವೇತನ ಶ್ರೇಣಿಯ ಪ್ರಕಾರ, ಬೆಂಗಳೂರಿನಲ್ಲಿರುವ ನುರಿತ ಕಾರ್ಮಿಕರು (Skilled workers) ತಿಂಗಳಿಗೆ 31,114 ರೂಪಾಯಿ ಪಡೆಯಲು ಅರ್ಹರಾಗಿರುತ್ತಾರೆ. ಇನ್ನುಳಿದಂತೆ, ಕರ್ನಾಟಕದ ಇತರ ಭಾಗಗಳಲ್ಲಿನ ಕನಿಷ್ಠ ವೇತನವು ಅವರ ಕೆಲಸದ ಸ್ಥಳ ಮತ್ತು ವರ್ಗವನ್ನು ಆಧರಿಸಿ 19,300 ರೂಪಾಯಿಯಿಂದ 21,251 ರೂಪಾಯಿಗಳವರೆಗೆ ಇರಲಿದೆ.

ಕನಿಷ್ಠ ವೇತನವನ್ನು ನಿರ್ಧರಿಸುವಾಗ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳಿಗೆ ಅನುಗುಣವಾಗಿಯೇ ಈ ಪರಿಷ್ಕರಣೆಯನ್ನು ಕೈಗೊಳ್ಳಲಾಗಿದೆ ಎಂದು ಸಂತೋಷ ಲಾಡ್ ತಿಳಿಸಿದ್ದಾರೆ.
“ನಮ್ಮ ಸರ್ಕಾರವು ಕಾರ್ಮಿಕರ ಕನಿಷ್ಠ ವೇತನವನ್ನು ಶೇಕಡಾ 60 ರಷ್ಟು ಹೆಚ್ಚಿಸಿ ಅಧಿಸೂಚನೆ ಹೊರಡಿಸಿದೆ. ಇದರ ಮೂಲಕ ರಾಜ್ಯದ ಕಾರ್ಮಿಕ ಸಮುದಾಯದ ದೀರ್ಘಕಾಲದ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದೆ,” ಎಂದು ಸಚಿವರು ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಸಂಘಟಿತ ವಲಯಕ್ಕೂ ಆರ್ಥಿಕ ಭದ್ರತೆ
ಪರಿಷ್ಕೃತ ವೇತನವು ಅಸಂಘಟಿತ ವಲಯದ ಕಾರ್ಮಿಕರಿಗೆ ಹಾಗೂ ಅಧಿಸೂಚಿತ ವಲಯಗಳ ನೌಕರರಿಗೆ ಆರ್ಥಿಕ ಭದ್ರತೆಯನ್ನು ಒದಗಿಸಲಿದೆ. ಅಲ್ಲದೆ, ಲಕ್ಷಾಂತರ ಕಾರ್ಮಿಕರನ್ನು ಹೆಚ್ಚು ವ್ಯವಸ್ಥಿತವಾದ ಚೌಕಟ್ಟಿನಡಿ ತರಲು ಇದು ಸಹಕಾರಿಯಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾಲ್ಕು ವಲಯಗಳ ವರ್ಗೀಕರಣ ರದ್ದು: ಏಕರೂಪದ ಅಧಿಸೂಚನೆ
ಇದೇ ಸಂದರ್ಭದಲ್ಲಿ ವೇತನ ವ್ಯವಸ್ಥೆಯಲ್ಲಿ ತಂದಿರುವ ಪ್ರಮುಖ ರಚನಾತ್ಮಕ ಬದಲಾವಣೆಯನ್ನು ಸಚಿವರು ಪ್ರಕಟಿಸಿದ್ದಾರೆ. ಈ ಹಿಂದೆ ಜಾರಿಯಲ್ಲಿದ್ದ ‘ನಾಲ್ಕು ವಲಯಗಳ ವರ್ಗೀಕರಣ’ (Four-zone classification model) ಮಾದರಿಯನ್ನು ಸರ್ಕಾರ ರದ್ದುಗೊಳಿಸಿದೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎಲ್ಲಾ ನಿಗದಿತ ಉದ್ಯೋಗಗಳನ್ನು (Scheduled employments) ಒಂದೇ ಅಧಿಸೂಚನೆಯಡಿ ತರಲಾಗಿದೆ ಎಂದು ಅವರು ಹೇಳಿದರು.
ಲಾಡ್ ಅವರ ಪ್ರಕಾರ, ಈ ಪರಿಷ್ಕೃತ ವೇತನ ರಚನೆಯಿಂದ ಕರ್ನಾಟಕದ 81 ನಿಗದಿತ ವೃತ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷಾಂತರ ಕಾರ್ಮಿಕರಿಗೆ ನೇರ ಲಾಭವಾಗಲಿದೆ. “ಈ ಅಧಿಸೂಚನೆಯು ರಾಜ್ಯಾದ್ಯಂತ ಇರುವ ಅಸಂಘಟಿತ ಮತ್ತು ಇತರ ನಿರ್ದಿಷ್ಟ ವಲಯಗಳ ಕಾರ್ಮಿಕರಿಗೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಕನಿಷ್ಠ ವೇತನವನ್ನು ನಿರ್ಧರಿಸುವಾಗ ಸುಪ್ರೀಂ ಕೋರ್ಟ್ ಪೀಠದ ನಿರ್ದೇಶನಗಳನ್ನೇ ಪಾಲಿಸಲಾಗಿದೆ,” ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕುಮಟಾ : ಶಾಲೆಯ ಪಕ್ಕವೇ ಭೂ ಕುಸಿತ ; ಕಟ್ಟಡಕ್ಕೆ ಬಂದು ಅಪ್ಪಳಿಸಿದ ಬೃಹತ್‌ ಬಂಡೆ

3 ವಲಯಗಳು ಮತ್ತು 4 ವರ್ಗಗಳು
ಹೊಸ ನಿಯಮದ ಪ್ರಕಾರ ಇಡೀ ರಾಜ್ಯವನ್ನು ವಲಯ-1: ಬೃಹತ್ ಬೆಂಗಳೂರು ಪ್ರದೇಶ (Greater Bengaluru Area),
ವಲಯ-2: ಇತರ ಮಹಾನಗರ ಪಾಲಿಕೆಗಳು ಮತ್ತು ಜಿಲ್ಲಾ ಕೇಂದ್ರಗಳು, ಹಾಗೂ ವಲಯ-3: ಉಳಿದ ಗ್ರಾಮೀಣ ಮತ್ತು ಸಣ್ಣ ಪಟ್ಟಣ ಪ್ರದೇಶಗಳು ಎಂದು ಮೂರು ವೇತನ ವಲಯಗಳಾಗಿ (Zones) ವಿಂಗಡಿಸಲಾಗಿದೆ
ಅಲ್ಲದೆ, ಕಾರ್ಮಿಕರನ್ನು ಅವರ ಕೌಶಲ್ಯದ ಆಧಾರದ ಮೇಲೆ ಅಕುಶಲ (Unskilled), ಅರೆ-ಕುಶಲ (Semi-skilled), ಕುಶಲ (Skilled) ಮತ್ತು ಉನ್ನತ ಕುಶಲ (Highly skilled) ಎಂದು ನಾಲ್ಕು ವಿಭಾಗಗಳಾಗಿ ವರ್ಗೀಕರಿಸಲಾಗಿದೆ.
ಬೆಂಗಳೂರು (ವಲಯ-1) ವ್ಯಾಪ್ತಿಯಲ್ಲಿ ಉನ್ನತ ಕುಶಲ ಕಾರ್ಮಿಕರಿಗೆ 31,114 ರೂ., ಕುಶಲ ಕಾರ್ಮಿಕರಿಗೆ 28,285 ರೂ., ಅರೆ-ಕುಶಲ ಕಾರ್ಮಿಕರಿಗೆ 25,714 ರೂ. ಮತ್ತು ಅಕುಶಲ ಕಾರ್ಮಿಕರಿಗೆ 23,376 ರೂ. ಮಾಸಿಕ ಕನಿಷ್ಠ ವೇತನ ಸಿಗಲಿದೆ. ಗ್ರಾಮೀಣ ಮತ್ತು ಸಣ್ಣ ಪಟ್ಟಣಗಳಲ್ಲಿ ಅಕುಶಲ ಕಾರ್ಮಿಕರಿಗೆ ಕನಿಷ್ಠ ಮಾಸಿಕ ವೇತನವನ್ನು 19,319 ರೂ. ಹಾಗೂ ಉನ್ನತ ಕುಶಲ ಕಾರ್ಮಿಕರಿಗೆ 25,714 ರೂ. ನಿಗದಿಪಡಿಸಲಾಗಿದೆ.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement